ಕಡೂರು: “ಟೀಕೆಗಳ ಬಗ್ಗೆ ಗಮನ ಕೊಡದೆ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದೇನೆ ಎಂಬ ಆತ್ಮತೃಪ್ತಿ ನನ್ನದಾಗಿದೆ” ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು.
ಕಡೂರಿನ ಚೌಡಿಪಾಳ್ಯ ಗ್ರಾಮದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅವರು ಮಾತನಾಡಿ, “ಐದು ವರ್ಷದ ಶಾಸಕತ್ವದ ಅವಧಿಯಲ್ಲಿ ಜಾತಿ ಧರ್ಮ ಅಥವಾ ಪಕ್ಷ ನೋಡದೆ ಸಮಾನವಾಗಿ ಎಲ್ಲ ಗ್ರಾಮಗಳಲ್ಲಿಯೂ ಒಂದಲ್ಲ ಒಂದು ಕಾಮಗಾರಿ ಮಾಡಿದ್ದೇನೆ. ತಳಸಮುದಾಯಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವಲ್ಲಿಯೂ ಶ್ರಮಿಸಿದ್ದೇನೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸ್ಪಷ್ಟ ಕಲ್ಪನೆಯಿಟ್ಟುಕೊಂಡು ಒಬ್ಬ ಶಾಸಕ ಏನೆಲ್ಲ ಮಾಡಬಹುದೋ ಅವೆಲ್ಲವನ್ನೂ ಮಾಡಿದ್ದೇನೆ” ಎಂದು ಅವರು ಹೇಳಿದರು.
“ಬರದ ನಾಡೆಂದೇ ಖ್ಯಾತಿ ಪಡೆದಿದ್ದ ಕ್ಷೇತ್ರ ನಮ್ಮದು. ಇಲ್ಲಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಭಧ್ರಾ ಉಪಕಣಿವೆ ಯೋಜನೆ ಸಾಕಾರಗೊಳ್ಳಲು ಕಾರಣರಾದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಧ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಿ ತಾಲೂಕಿಗೆ ಮಹತ್ವದ ಕೊಡುಗೆ ನೀಡಿದೆ. ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ 21 ಚೆಕ್ ಡ್ಯಾಂಗಳ ನಿರ್ಮಾಣವಾಗಿರುವುದು ನಿಜಕ್ಕೂ ಸಾಧನೆಯೇ ಆಗಿದೆ” ಎಂದು ಶಾಸಕರು ಹೇಳಿದರು.
“ಕ್ಷೇತ್ರವನ್ನು ಮಾದರಿಯನ್ನಾಗಿಸಲು ಇನ್ನೂ ಬಹಳಷ್ಟು ಯೋಜನೆಗಳಿವೆ. ಪೂರಕವಾಗಿ ನನ್ನ ಚಿಂತನೆಗಳೂ ಇವೆ. ಅವೆಲ್ಲವನ್ನೂ ಸಾಕಾರಗೊಳಿಸಲು ಮತ್ತೊಮ್ಮೆ ಅವಕಾಶ ನೀಡಿ. ಸುಳ್ಳು ಭರವಸೆಗಳಿಗೆ ಮಾರುಹೋಗದೆ ಬಿಜೆಪಿ ಪಕ್ಷಕ್ಕೆ ಮತ ನೀಡಿ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧ” ಎಂದರು.
ಇದನ್ನೂ ಓದಿ: Karnataka Election 2023: ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿಯ ಸೋಮಣ್ಣ 50 ಲಕ್ಷ ರೂ.ಆಮಿಷ; ಆಯೋಗಕ್ಕೆ ದೂರು
“ಭ್ರಷ್ಟಾಚಾರದ ಬಗ್ಗೆ ಮಾತನಾಡುವವರಿಗೆ ಉತ್ತರ ಕೊಡಲು ಹೋಗುವುದಿಲ್ಲ. ಅವರಿಗೆ ಉತ್ತರವನ್ನು ನಾವು ಮಾಡಿದ ಕೆಲಸಗಳೇ ಹೇಳುತ್ತವೆ. ನಮ್ಮ ಗಮನವೇನಿದ್ದರೂ ಅಭಿವೃದ್ಧಿಯ ಕಡೆ ಮಾತ್ರ. ಟೀಕೆಗಳ ಕಡೆಗಲ್ಲ. ಅವರೆಲ್ಲರಿಗೂ ಒಳ್ಳೆಯದಾಗಲಿ. ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಅವರೆಲ್ಲರ ಶ್ರಮದಿಂದ ಮತ್ತೆ ಗೆಲುವು ಸಾಧಿಸುವ ವಿಶ್ವಾಸ ನಮ್ಮದು” ಎಂದರು.
ಬಿಜೆಪಿ ಮಂಡಲ ವಕ್ತಾರ ಕೆ.ಆರ್.ಮಹೇಶ್ ಒಡೆಯರ್ ಮಾತನಾಡಿ, “ಜಾತಿ ಆಧಾರದ ಮೇಲೆ ಮತಗಳನ್ನು ಒಡೆಯುವ ಕೆಲಸಕ್ಕೆ ವಿರೋಧ ಪಕ್ಷಗಳು ಕೈಹಾಕಿವೆ. ಇದು ಅವರಿಗೆ ತಿರುಗುಬಾಣವಾಗಲಿದೆ. ವಿರೋಧ ಪಕ್ಷಗಳು ಕ್ಷೇತ್ರದಲ್ಲಿ ಸಂಘರ್ಷವನ್ನು ಹುಟ್ಟುಹಾಕದೆ ಆರೋಗ್ಯಕರವಾಗಿ ಚುನಾವಣೆಯನ್ನು ಎದುರಿಸಲು ಮುಂದಾಗಬೇಕು. ಕೇವಲ ಭರವಸೆ ಕೊಡುವ ನಾಯಕರಿಂದ ಕ್ಷೇತ್ರದ ಅಭಿವೃದ್ದಿಯಾಗುವುದಿಲ್ಲ. ಶಾಸಕ ಬೆಳ್ಳಿಪ್ರಕಾಶ್ ಕ್ಷೇತ್ರದ ಅಭಿವೃದ್ಧಿ ಮಾಡಿ ಆ ಮೂಲಕ ನೈತಿಕತೆಯಿಟ್ಟುಕೊಂಡು ಮತ ಕೇಳಲು ಬಂದಿದ್ದಾರೆ. ಅವರನ್ನು ಮತ್ತೊಮ್ಮೆ ಚುನಾಯಿಸುವ ಮೂಲಕ ಕ್ಷೇತ್ರಾಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಮತದಾರರು ನೀಡಬೇಕು” ಕೋರಿದರು.
ಕಾರ್ಯಕ್ರಮದಲ್ಲಿ ತಿಮ್ಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಮ್ಮ, ಗ್ರಾಮದ ಮುಖಂಡರಾದ ಚಂದ್ರಪ್ಪ, ಶಿವಣ್ಣ, ಕುಮಾರ್, ಸಿದ್ದೇಶ್, ಮಂಜುನಾಥ್, ಜಿ.ಶಿವರಾಜ್, ಟಿ.ಆರ್.ಲಕ್ಕಪ್ಪ, ಶ್ರೀನಿವಾಸ್, ಸಾವೆ ಮರುಳಪ್ಪ, ಕೆ.ಎನ್. ಬೊಮ್ಮಣ್ಣ, ಸತೀಶ್ ಇದ್ದರು.