ಕಡೂರು: ವಿಧಾನಸಭಾ ಚುನಾವಣೆ (Karnataka Election) ಹತ್ತಿರವಾಗುತ್ತಿದ್ದಂತೆಯೇ ಎಲ್ಲೆಡೆ ಪ್ರಚಾರದ ಜತೆಯಲ್ಲಿ ಪಕ್ಷಾಂತರವೂ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಕಡೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ವಿನಾಯಕ ಅವರು ಕಾಂಗ್ರೆಸ್ ತೊರೆದಿದ್ದು, ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ತಾಲೂಕಿನ ಮರವಂಜಿಯಲ್ಲಿ ವಿನಾಯಕ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ ಮಾತನಾಡಿ, “ಕೆ.ಎಂ.ವಿನಾಯಕ ಅವರ ಪಕ್ಷ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ತಾಲೂಕಿಗೆ ಈಗ ತುರ್ತಾಗಿ ಬೇಕಾಗಿರುವುದು ಅಭಿವೃದ್ಧಿ. ಹಾಗೆಯೇ ಜನರಿಗೆ ನೆಮ್ಮದಿ ದೊರೆಯಬೇಕಿದೆ. ತಾಲೂಕಿನ ಪ್ರಭಾವಿ ಮುಖಂಡರು, ಕಾಂಗ್ರೆಸ್ ಕುಟುಂಬವೇ ಆಗಿಹೋಗಿದ್ದ ಹಾಗೂ ತಾಲೂಕಿನ ಏಕೈಕ ಸಚಿವರಾಗಿದ್ದ ಕೆ.ಎಸ್.ಮಲ್ಲಿಕಾರ್ಜುನ ಪ್ರಸನ್ನ ಅವರ ಮಗ ಕೆ.ಎಂ.ವಿನಾಯಕ ಅವರ ಪಕ್ಷ ಸೇರ್ಪಡೆ ನಮ್ಮೆಲ್ಲರಿಗೂ ಸ್ಫೂರ್ತಿ ತಂದಿದೆ” ಎಂದರು.
ಇದನ್ನೂ ಓದಿ: Karnataka Election : ಅಸತೋಮಾ ಸದ್ಗಮಯ; ಇದು ಕಾಂಗ್ರೆಸ್ ಹೇಳಿದ ಸುಳ್ಳು ಮತ್ತು ಬಿಜೆಪಿ ಹೇಳಿದ ಸತ್ಯಗಳ ಸಂಕಲನ!
ಕೆ.ಎಂ.ವಿನಾಯಕ ಮಾತನಾಡಿ, “ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದ್ದೇನೆ. ಕಡೂರು ತಾಲೂಕಿನಲ್ಲಿ ಈಗ ತುರ್ತಾಗಿ ಜನರ ಬದುಕನ್ನು ಕಟ್ಟಿಕೊಡುವ, ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ದ್ವೇಷರಹಿತವಾದ ವಾತಾವರಣ ನಿರ್ಮಾಣವಾಗಬೇಕು. ಅಂತಹ ಸ್ಥಿತಿ ವೈ.ಎಸ್.ವಿ.ದತ್ತ ಅವರು ಶಾಸಕರಾದಾಗ ಬರಬಹುದು ಎಂಬ ವಿಶ್ವಾಸ ನನ್ನದಾಗಿದೆ” ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಮುಖಂಡರಾದ ಕುಂಕಾನಾಡು ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾಬಾಯಿ ಕೃಷ್ಣಮೂರ್ತಿ, ಬೀರೂರು ಪುರಸಭೆ ಸದಸ್ಯ ಪ್ರದೀಪ್, ಬಿ.ಟಿ.ಗಂಗಾಧರ ನಾಯ್ಕ, ಬಿದರೆ ಜಗದೀಶ್, ಬಿ.ಪಿ.ನಾಗರಾಜು ಜತೆಗಿದ್ದರು.