ಚಿಕ್ಕಮಗಳೂರು: ಬೀದಿಯಲ್ಲಿ ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಮಹಿಳೆಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ ವೈದ್ಯರೊಬ್ಬರ ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ನಡವಳಿಕೆ (Kindness) ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಅಜ್ಜಂಪುರ ತಾಲೂಕಿನ ಗಡಿರಂಗಾಪುರದ ತುಂಬು ಗರ್ಭಿಣಿಯೊಬ್ಬರು ಬಿ ನೆಗೆಟಿವ್ ರಕ್ತದ ಕೊರತೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೊರಟಿದ್ದರು. ತರೀಕೆರೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವಾಗ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ಮಹಿಳೆ ತರೀಕೆರೆ ಸರ್ಕಾರಿ ಆಸ್ಪತ್ರೆ ಬಾಗಿಲ ಮುಂದೆ ಬಸ್ ನಿಲ್ದಾಣದ ಬಳಿ ನೋವಿನಿಂದ ನರಳಾಡುತ್ತಿದ್ದುದನ್ನು ಗಮನಿಸಿದ ತರೀಕೆರೆ ತಾಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಅವರು ಆಕೆ ಹಾಗೂ ಕುಟುಂಬದವರಲ್ಲಿ ವಿಚಾರಿಸಿದ್ದಾರೆ. ಕೂಡಲೇ ಬಿ ನೆಗೆಟಿವ್ ರಕ್ತ ಸಕಾಲದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಿಕೊಂಡು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರಲ್ಲದೆ, ಹೆರಿಗೆಯನ್ನೂ ಮಾಡಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರ ಕರ್ತವ್ಯಪ್ರಜ್ಞೆ, ಪ್ರಸಂಗಾವಧಾನತೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Kunigal MLA: ಬಡ ಮಹಿಳೆಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ. ರಂಗನಾಥ್