ಬೆಂಗಳೂರು: ಮಲೆನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಮಲೆನಾಡು ಜನಪರ ಒಕ್ಕೂಟವು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 20ರಂದು ಒಂದು ದಿನ ಪ್ರತಿಭಟನೆ ಹಮ್ಮಿಕೊಂಡಿದೆ.
ಮಲೆನಾಡಿನ ಜನರು ಎದುರಿಸುತ್ತಿರುವ ಸುಮಾರು 20ಕ್ಕೂ ಹೆಚ್ಚು ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸರ್ಕಾರ ಈ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಮುಂದೆ ಅನಿರ್ದಿಷ್ಟ ಮುಷ್ಕರ ನಡೆಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಪ್ರತಿಭಟನೆ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಮಲೆನಾಡು ಜನಪರ ಒಕ್ಕೂಟ ತಿಳಿಸಿದೆ.
ಮುಖ್ಯವಾಗಿ ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಎಲೆಚುಕ್ಕಿ ರೋಗ ಕಾಡುತ್ತಿದ್ದು, ಅಡಿಕೆ ತೋಟ ತೋಟವೇ ನಾಶವಾಗುತ್ತಿದೆ. ಇದಕ್ಕೆ ಇನ್ನೂ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಕೂಡಲೇ ನಷ್ಟ ಅನುಭವಿಸಿರುವ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕು ಹಾಗೂ ಔಷಧಿ ಸಂಶೋಧನೆಗೆ ಉತ್ತೇಜನ ನೀಡಬೇಕು, ಪಶ್ಚಿಮಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿ ವಲಯವನ್ನಾಗಿ ಘೋಷಿಸಬೇಕು, ಅರಣ್ಯ ಕಾಯ್ದೆಗಳಿಂದಾಗುತ್ತಿರುವ ಕಿರಿಕಿರಿಗಳನ್ನು ತಪ್ಪಿಸಿ, ಪಾರಂಪರಿಕ ಅರಣ್ಯ ಕಾಯ್ದೆ ಕಾಲಮಿತಿಯನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸಿ, ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಈ ಪ್ರತಿಭಟನೆ ಸಂದರ್ಭದಲ್ಲಿ ಒತ್ತಾಯಿಸಲಾಗುತ್ತದೆ.
ಈಗಾಗಲೇ ಮಲೆನಾಡು ಭಾಗದ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ, ಮಲೆನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಈ ಮನವಿ ಪತ್ರವನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಸರ್ಕಾರಕ್ಕೆ ಸಲ್ಲಿಸಲಾಗುವ ಮನವಿ ಪತ್ರಕ್ಕೆ ಸಹಿ ಸಂಗ್ರಹ ನಡೆಸಲಾಗಿದೆ. ಮಲೆನಾಡಿನ ಜನರು ನಡೆಸುತ್ತಿರುವ ಈ ಹೋರಾಟಕ್ಕೆ ಈಗಾಗಲೇ ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ನಮ್ಮ ಈ 20 ಬೇಡಿಕೆಗಳಲ್ಲಿ ಮಲೆನಾಡಿನ ಜನರು ಬಹಳ ಹಿಂದಿನಿಂದಲೂ ಅನುಭವಿಸುತ್ತಿರುವ ಸಮಸ್ಯೆಗಳೂ ಸೇರಿವೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಈ ಹಿಂದೆ ಕೇಂದ್ರ ಸರ್ಕಾರ ನೇಮಿಸಿದ್ದ ಗೋರಖ್ ಸಿಂಗ್ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದೂ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟ ಹೇಳಿದೆ.
ಸೆ.20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಈ ಪ್ರತಿಭಟನೆ ನಡೆಯಲಿದ್ದು, ಮಲೆನಾಡಿಗರು ಹಾಗೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಲೆನಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಲೆನಾಡು ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ ಕೋರಿದ್ದಾರೆ.
ಇದನ್ನೂ ಓದಿ| Kasturirangan Report | ಹೊಸ ಸಮಿತಿ ವಿಚಾರ ಹೊಸದೇನಲ್ಲ! ಆದರೆ ರಾಜ್ಯ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ!!