Site icon Vistara News

Operation Elephant | ಮೂಡಿಗೆರೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಭೈರ ಸೆರೆ

Operation Elephant

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ದಾಳಿ ಮಾಡಿ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಭೈರನನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದ ಮೂರು ಕಾಡಾನೆಗಳ ಪೈಕಿ ಈಗಾಗಲೇ ಎರಡನ್ನು ಸೆರೆ ಹಿಡಿಯಲಾಗಿದ್ದು, ಭಾನುವಾರ ಮೂರನೇ ಆನೆಯನ್ನೂ (Operation Elephant) ಸೆರೆ ಹಿಡಿಯಲಾಗಿದೆ.

ಮೂಡಿಗೆರೆ ತಾಲೂಕಿನ ಊರಬಗೆ ಸಮೀಪ ಭೈರ ಕಾಣಿಸಿಕೊಂಡಿತ್ತು. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸಂಜೆ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ತಿಂಗಳ ಹಿಂದೆ ಭೈರನಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕಾಡಾನೆ ಕಾಡಿನತ್ತ ಮುಖ ಮಾಡಿತ್ತು. ಆದರೆ ಈಗ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

ಮೂಡಿಗೆರೆ ತಾಲೂಕಿನ ಕಳೆದ ಮೂರು ತಿಂಗಳಲ್ಲಿ ಕಾಡಾನೆಗಳು ಮೂವರನ್ನು ಬಲಿ ತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿತ್ತು. ತೊಂದರೆ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಆರಂಭವಾಗಿದ್ದ ಆಪರೇಶನ್‌ ಎಲಿಫೆಂಟ್‌ ಕಾರ್ಯಾಚರಣೆ ವೇಳೆ ಕುಂಡ್ರ ಗ್ರಾಮದಲ್ಲಿ ಮೊದಲ ದಿನವೇ ಪುಂಡಾನೆಯೊಂದನ್ನು ಆನೆ ಸೆರೆ ಹಿಡಿಯಲಾಗಿತ್ತು. ನಂತರ ತಳವಾರ ಗ್ರಾಮದಲ್ಲಿ ಮತ್ತೊಂದು ಕಾಡಾನೆ ಸೆರೆಯಾಗಿತ್ತು. ಈಗ ಮೂರನೇ ಆನೆ ಭೈರ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ 6 ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ | Elephant tusk | ಆನೆ ದಂತ ಮಾರಾಟಕ್ಕೆ ಯತ್ನಿಸಿದ ಐವರು ಖದೀಮರು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ

Exit mobile version