Site icon Vistara News

Arun Yogiraj: ರಾಮಲಲ್ಲಾ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಹರಿಹರಪುರ ಶ್ರೀಗಳ ಆಶೀರ್ವಾದ

Arun Yogiraj

ಚಿಕ್ಕಮಗಳೂರು: ಮೈಸೂರಿನ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಕೆತ್ತಿದ ರಾಮಲಲ್ಲಾ ವಿಗ್ರಹ ಅಯೋಧ್ಯೆ ರಾಮ ಮಂದಿರದಲ್ಲಿ ಜ.22ರಂದು ಪ್ರತಿಷ್ಠಾಪನೆಯಾಗುತ್ತಿದೆ. ಇದು ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹೆಮ್ಮೆ ಪಡುವ ವಿದ್ಯಮಾನವಾಗಿದೆ. ಹೀಗಾಗಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗುತ್ತಿರುವ ಅರುಣ್‌ ಯೋಗಿರಾಜ್‌ ಅವರ ಬಗ್ಗೆ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನ ಪರಿಪೂರ್ಣ ಅನುಗ್ರಹ ನಿರಂತರವಾಗಿರಲಿ ಎಂದು ಆಶೀರ್ವದಿಸಿದ್ದಾರೆ.

ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆಲವು ವರ್ಷಗಳ ಹಿಂದೆ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರಿಂದ ಅನುಗ್ರಹಿತರಾಗಿ ಆಶೀರ್ವಾದವನ್ನು ಪಡೆದಿದ್ದರು. ಸ್ವಾಮೀಜಿಗಳ ಪರಿಪೂರ್ಣ ಅನುಗ್ರಹದಿಂದ ಇಂದು ಕರ್ನಾಟಕ ಸೇರಿ ಇಡೀ ಭಾರತ ದೇಶವು ಹೆಮ್ಮೆಪಡುವಂತಹ ಶಂಕರಾಚಾರ್ಯರ, ಸುಭಾಷ್ ಚಂದ್ರಬೋಸ್‌ ಹಾಗೂ ಅಯೋಧ್ಯೆಯಲ್ಲಿ ಜ. 22 ರಂದು ಪ್ರತಿಷ್ಠಾಪನೆಗೊಳ್ಳುತ್ತಿರುವ ಬಾಲರಾಮರ ವಿಗ್ರಹವನ್ನು ಕೆತ್ತನೆ ಮಾಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಹೀಗಾಗಿ ಅರುಣ್‌ ಯೋಗಿರಾಜ್‌ಗೆ ಕ್ಷೇತ್ರಾಧಿದೇವತೆಗಳಾದ ತಾಯಿ ಶಾರದಾ ಪರಮೇಶ್ವರಿ, ಭಗವಾನ್ ಲಕ್ಷ್ಮೀ ನರಸಿಂಹ ಹಾಗೂ ಹರಿಹರ ಶಂಕರಾಚಾರ್ಯರ ಪರಿಪೂರ್ಣ ಅನುಗ್ರಹ ನಿರಂತರವಾಗಿರಲಿ ಎಂದು ಶ್ರೀಗಳು ಆಶೀರ್ವದಿಸಿದ್ದಾರೆ.

ಇದನ್ನೂ ಓದಿ | Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿಯೇ ಮುಖ್ಯ ‘ಯಜಮಾನ’

ರಾಮಮಂದಿರದಲ್ಲಿ ಕನ್ನಡಿಗ ಕೆತ್ತಿದ ಮೂರ್ತಿ; ಯಾರಿವರು ಅರುಣ್‌ ಯೋಗಿರಾಜ್?

Ram Lalla statue selected for installation at Ram temple; Who is Mysuru-based Arun Yogiraj?

ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ (Arun Yogiraj) ಅವರು ಕೆತ್ತಿರುವ ಬಾಲರಾಮನ (Ram lalla Statue) ವಿಗ್ರಹ ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ನಿರ್ಮಿಸಲಾಗಿರುವ ರಾಮಮಂದಿರದಲ್ಲಿ (Ram Mandir) ಪ್ರತಿಷ್ಠಾಪನೆಗೊಳ್ಳಲಿರುವುದು ನಿಶ್ಚಿತವಾಗಿದೆ. ಈ ವಿಗ್ರಹ ಆಯ್ಕೆಯಾಗಿರುವುದರ ಹಿಂದೆ ಕನ್ನಡಿಗ ಶಿಲ್ಪಿ ಅರುಣ್​ ಅವರ ಅಪಾರ ಪರಿಶ್ರಮ. ಭಕ್ತಿ, ಶ್ರದ್ಧೆಯಿದೆ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಹಾಗಾದರೆ, ಯಾರಿವರು ಅರುಣ್‌ ಯೋಗಿರಾಜ್?‌ ಇವರ ಹಿನ್ನೆಲೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಂಬಿಎ ಪದವೀಧರ ಅರುಣ್​

ಶಿಲ್ಪಿ ಅರುಣ್​ ಯೋಗಿರಾಜ್ ಅವರು ಎಂಬಿಎ ಪದವೀಧರ. ಶಿಲ್ಪಕಲೆಯೇ ಅವರ ಕುಲಕಸುಬು. ಅವರ ಕುಟುಂಬದ ಐದನೇ ತಲೆಮಾರಿನ ಶಿಲ್ಪಿ. ಅವರು 2008ರಿಂದ ಇಲ್ಲಿಯವರೆಗೆ 1000ಕ್ಕೂ ಹೆಚ್ಚು ವಿಗ್ರಹಗಳನ್ನು ಕೆತ್ತನೆ ಮಾಡಿದ್ದಾರೆ. ಅದರಲ್ಲೂ, ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೂಡ ಇವರೇ ಕೆತ್ತಿದ್ದಾರೆ. ನವ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಇವರೇ ಅರಳಿಸಿದ್ದಾರೆ.

ಕರುನಾಡಿನ ಕಲ್ಲು

ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ | Ayodhya Ram Mandir: ಮಂದಿರವನ್ನು ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ, ಜ.22ಕ್ಕೆ ಪ್ರತಿಷ್ಠಾಪನೆ

ಮೂರ್ತಿ ತಯಾರಿಕೆಗೆ ಅರುಣ್​ ಆರು ತಿಂಗಳ ಹಿಂದೆ ಮನೆಯಿಂದ ತೆರಳಿದ್ದಾರೆ. ಅರುಣ್ ಅವರು ಸತತವಾಗಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಕೆಲವೊಂದು ಬಾರಿ ದಿನದ 24 ಗಂಟೆಗೆಯೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಯಾಕೆಂದರೆ ರಾಮಲಲ್ಲಾನ ಮೂರ್ತಿಗೆ ಮಾದರಿಯೇ ಇರಲಿಲ್ಲ. ಬೇರೆಲ್ಲ ದೇವರ ಪ್ರತಿಮೆಗೆ ಮಾದರಿಗಳಿರುತ್ತವೆ. ಆದರೆ, ಬಾಲರಾಮನಿಗೆ ಇಲ್ಲ. ಹೀಗಾಗಿ ಅದನ್ನು ಕಲ್ಪಿಸಿಕೊಂಡು ಮಾಡುವ ಜವಾಬ್ದಾರಿ ಅರುಣ್ ಅವರ ಮೇಲಿತ್ತು. ಅದನ್ನು ಅವರು ಸಾಧಿಸಿದ್ದಾರೆ ಎಂದು ಇವರ ಅರುಣ್‌ ಯೋಗಿರಾಜ್‌ ಅವರ ಪತ್ನಿ ವಿಜೇತ ಖುಷಿಯಿಂದ ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version