ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು ಬೀಳುತ್ತಿರುವ ಪರಿಣಾಮ ದಾರಿ ಕಾಣುತ್ತಿಲ್ಲ. ಹೀಗಾಗಿ ವಾಹನಗಳು ಡಿಕ್ಕಿಯಾಗುತ್ತಿವೆ. ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ತಡೆಗೋಡೆ ಕುಸಿದುಬಿದ್ದಿದ್ದರೂ, ವಾಹನ ಪ್ರಯಾಣಿಕರು ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಮಂಜು ಬೀಳುತ್ತಿರುವ ಕಾರಣ ದಾರಿ ಕಾಣದೆ ಘಾಟಿಯಲ್ಲಿ ಎರಡು ಅಪಘಾತಗಳು ಸಂಭವಿಸಿವೆ. ಬಿದಿರುತಳ ಗ್ರಾಮದ ಬಳಿ ಬೊಲೆರೋ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದು ಮಗುಚಿದೆ. ತಡೆಗೊಡೆ ಕುಸಿದು ವಾಹನ ಅರ್ಧ ಗೋಡೆಯಿಂದಾಚೆಗೆ ಚಾಚಿಕೊಂಡಿತು. ಆದರೆ ಪ್ರಪಾತಕ್ಕೆ ಬೀಳಲಿಲ್ಲ. ಹೀಗಾಗಿ ವಾಹನ ಪ್ರಯಾಣಿಕರು ಪಾರಾದರು.
ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಸ್ಸು-ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ತಡೆಗೋಡೆ ಕುಸಿದು ಬಿದ್ದಿದೆ. ಪ್ರಪಾತದ ಬಳಿಯೇ ಅಪಘಾತ ಆಗಿದ್ದರೂ ಭಾರೀ ಅನಾಹುತ ಜಸ್ಟ್ ಮಿಸ್ ಆಗಿದೆ. 2 ಅಪಘಾತದಲ್ಲೂ ಕಾರು-ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ತಡೆಗೋಡೆ ನಿರ್ಮಿಸಲು ಸ್ಥಳಿಯರು ಆಗ್ರಹಿಸಿದ್ದಾರೆ.
22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ಮಳೆ ಜೊತೆಗೆ ಕವಿದಿರುವ ಮಂಜು, ವಾಹನಗಳನ್ನು ಡ್ರೈವ್ ಮಾಡಲು ಚಾಲಕರು ಹರಸಾಹಸ ಪಡುವಂತೆ ಮಾಡಿದೆ.
ಟ್ಯಾಂಕರ್- ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ
ಶಿವಮೊಗ್ಗ: ಬೈಕ್ ಹಾಗೂ ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಹೊಸನಗರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೆಇಬಿ ಸರ್ಕಲ್‌ನಲ್ಲಿ ಟ್ಯಾಂಕರ್, ಬುಲೆಟ್ ನಡುವೆ ಡಿಕ್ಕಿಯಾಗಿದೆ.
ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತಿದ್ದ ಟ್ಯಾಂಕರ್ ಹಾಗೂ ಹೊಸನಗರದಿಂದ ಸುತ್ತತೆಂಕಬೈಲ್ ಕಡೆಗೆ ಹೋಗುತ್ತಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಟ್ಯಾಂಕ್ ಬೈಲ್ ಲೋಕಪ್ಪ ಗೌಡ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident : ರಜೆ ಮೇಲೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ; ಮತ್ತೊಬ್ಬ ಗಂಭೀರ