ಶಿವಮೊಗ್ಗ: ನಶೆಯ ಗುಂಗಿನಲ್ಲಿ ತೇಲುತ್ತಿರುವ ವಿದ್ಯಾರ್ಥಿಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಪೋಷಕ ವಲಯದಲ್ಲಿ ತಲ್ಲಣ ಮೂಡಿಸಿದೆ. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ಮಾದಕ ವಸ್ತುವನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ.
ಸಹಪಾಠಿಗಳಿಂದಲೇ ವಿಡಿಯೊ ಚಿತ್ರೀಕರಣ ಆಗಿದೆ ಎನ್ನಲಾಗಿದೆ. ಮೂವರು ವಿದ್ಯಾರ್ಥಿಗಳು ತೂರಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶನಿವಾರ ( ಜು.23) ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಕಾಲೇಜು ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್ ಎದ್ದು ಕಾಣುತ್ತಿದೆ. ವಿಡಿಯೊದಲ್ಲಿ ಸ್ನೇಹಿತರ ಜತೆ ಮೊದಲ ಬಾರಿ ಮಾದಕ ವಸ್ತುಗಳನ್ನು ಸೇವಿಸಿದಂತೆ ಭಾಸವಾಗಿದೆ.
ಇದನ್ನೂ ಓದಿ | ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿ ಚಿತ್ರ, ವಿಡಿಯೊ ವೈರಲ್ ಮಾಡಿದ ಬಿಜೆಪಿ ಶಾಸಕನ ಮೇಲೆ ಕೇಸ್
ಈ ಘಟನೆ ಎಲ್ಲೇ ನಡೆದಿದ್ದರೂ ಪೊಲೀಸರು ದಿಟ್ಟ ಕ್ರಮ ಕೈಗೊಂಡು ಶಾಲಾ – ಕಾಲೇಜು ಕ್ಯಾಂಪಸ್ ಹಾಗೂ ಹಾಸ್ಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಮಾತ್ರವಲ್ಲ, ರಾಜ್ಯದ ಹಲವು ಶಾಲಾ-ಕಾಲೇಜು ಆವರಣದಲ್ಲಿ ಇಂಥ ಆತಂಕಕಾರಿ ದೃಶ್ಯಗಳು ಕಂಡು ಬರುತ್ತಿವೆ. ಇದನ್ನು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ʻವಿದ್ಯಾರ್ಥಿಗಳು ಸಾಗರ ರಸ್ತೆಯ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಕಾಲೇಜಿನ ಗೇಟ್‌ನಲ್ಲಿ ತಡೆದಿದ್ದಾರೆ. ಇದೀಗ ವಿದ್ಯಾರ್ಥಿಗಳ ಪೋಷಕರೊಂದಿಗೆ ಕಾಲೇಜು ಆಡಳಿತ ಮಂಡಳಿ ಸಮಾಲೋಚನೆ ನಡೆಸಲಿದೆʼ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.