ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ (Chikkaballapur Assembly Constituency) ಬಿಜೆಪಿ ಅಭ್ಯರ್ಥಿ, ಆರೋಗ್ಯ ಸಚಿವರಾಗಿದ್ದ ಡಾ. ಕೆ.ಸುಧಾಕರ್ ಸೋತಿದ್ದಾರೆ. ಇವರನ್ನು ಸೋಲಿಸಿ, ಗೆಲುವಿನ ನಗು ಬೀರಿದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್. ಪ್ರದೀಪ್ ಈಶ್ವರ್ ಒಬ್ಬ ಡಮ್ಮಿ ಅಭ್ಯರ್ಥಿ ಎಂದೇ ಚರ್ಚೆ ನಡೆಯುತ್ತಿತ್ತು. ಆದರೆ ಫಲಿತಾಂಶ ಹೊರಬಿದ್ದಾಗ ಲೆಕ್ಕಾಚಾರ ಉಲ್ಟಾ ಆಗಿತ್ತು. ಪ್ರದೀಪ್ ಈಶ್ವರ್ ಗೆದ್ದಿದ್ದರು. ಬಿಜೆಪಿ ಪ್ರಭಾವಿ ನಾಯಕ ಮತ್ತು ಪ್ರಮುಖವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ನಿಭಾಯಿಸುತ್ತಿದ್ದ ಸುಧಾಕರ್ ಸೋಲು ನಿಜಕ್ಕೂ ಅಚ್ಚರಿಯನ್ನೇ ತಂದಿದೆ.
ಈಗ ಕಾಂಗ್ರೆಸ್ ಬಹುಮತ ಗಳಿಸಿದ ಬೆನ್ನಲ್ಲೇ ಅಲ್ಲಿ ಸಚಿವ ಸ್ಥಾನ ಯಾರ್ಯಾರಿಗೆಲ್ಲ ಸಿಗಲಿದೆ ಎಂಬ ಬಗ್ಗೆ ಚರ್ಚೆಯೂ ಶುರುವಾಗಿದೆ. ಆ ಮಾತುಕತೆಯಲ್ಲೀಗ ಕೇಳಿಬರುತ್ತಿರುವುದು ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಡಾ. ಎಂ.ಸಿ.ಸುಧಾಕರ್ ಹೆಸರು. ಡಾ. ಎಂ.ಸಿ.ಸುಧಾಕರ್ ಅವರು ಚಿಂತಾಮಣಿಯಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಜೆಡಿಎಸ್ನಿಂದ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಬಿಜೆಪಿಯಿಂದ ಜಿ.ಎನ್.ವೇಣುಗೋಪಾಲ ಅವರು ಸ್ಪರ್ಧಿಸಿದ್ದರು. ಇವರಿಬ್ಬರನ್ನೂ ಸುಧಾಕರ್ ಸೋಲಿಸಿದ್ದಾರೆ.
ಇದನ್ನೂ ಓದಿ: Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್ ಈಶ್ವರ್
ಡಾ. ಕೆ.ಸುಧಾಕರ್‌ರನ್ನು ಸೋಲಿಸುವಲ್ಲಿ ಈ ಡಾ. ಎಂ.ಸಿ.ಸುಧಾಕರ್ ಅವರು ತುಂಬ ಮಹತ್ವದ ಪಾತ್ರ ವಹಿಸಿದ್ದಾರೆ. ಇವರಿಗೆ ಈ ಸಲ ಸಂಪುಟ ಸ್ಥಾನದಲ್ಲಿ ಸಚಿವ ಸ್ಥಾನ ಪಕ್ಕಾ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಅದರಲ್ಲೂ ಕೆ.ಸುಧಾಕರ್ ನಿಭಾಯಿಸುತ್ತಿದ್ದ ಆರೋಗ್ಯ ಖಾತೆಯ ಜವಾಬ್ದಾರಿ ಇವರಿಗೆ ಲಭಿಸಲಿದೆ ಎಂದು ಹೇಳಲಾಗಿದೆ. ಇನ್ನು ಈ ಡಾ. ಎಂ.ಸಿ.ಸುಧಾಕರ್ ಅವರು ದಂತ ಚಿಕಿತ್ಸಕ ವ್ಯದ್ಯರಾಗಿದ್ದವರು. ಸುಧಾಕರ್ ಮೂಲತಃ ಕಾಂಗ್ರೆಸ್ನವರೇ ಆಗಿದ್ದು, 2 ಬಾರಿ ಈ ಪಕ್ಷದಿಂದಲೇ ಅಭ್ಯರ್ಥಿಯಾಗಿದ್ದರು. 2013 ಮತ್ತು 2018ನೇ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಈ ಸಲ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಬಹಳ ಮುಖ್ಯವಾಗಿ ಅವರು ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.