ಹಿರಿಯೂರು: ಕೃಷಿ ವಿಶ್ವವಿದ್ಯಾಲಯಗಳಿಂದ ಎಷ್ಟು ಪದವೀಧರರು (Graduates) ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ, ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ, ರೈತ (Farmer) ಪರ ಸಂಶೋಧನೆಗೆ (Research) ಹೆಚ್ಚು ಒತ್ತು ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂ ನ ಶತಮಾನೋತ್ಸವ ಮತ್ತು ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Koppala News: ಮಸೀದಿಗೆ ಮಂಗಳಾರತಿ! ಗಂಗಾವತಿ ನಗರ ಠಾಣೆ ಪಿಐ ಸೇರಿ ಮೂವರು ಸಸ್ಪೆಂಡ್
ಚಿತ್ರದುರ್ಗ ಮೊದಲೇ ಬರಪೀಡಿತ ಜಿಲ್ಲೆಯಾಗಿದೆ. ಈ ಜಿಲ್ಲೆಗೆ ಬರಗಾಲ ಬಂದರೆ ರೈತರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಲಿದೆ. ಜಿಲ್ಲೆಯಲ್ಲಿ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕು. ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಬೇಕು. ಹವಾಮಾನ ಬದಲಾವಣೆಯಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಸಂಶೋಧನೆಯಿಂದ ಪತ್ತೆ ಹಚ್ಚಬೇಕು ಎಂದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಿದ್ದೇವೆ, ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬಿತ್ತನೆ ಮಾಡಲಾಗಿದೆ. ಇದರಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಸುಮಾರು 52% ಬೆಳೆ ನಷ್ಟ ಉಂಟಾಗಿದೆ. ಬರಗಾಲದಿಂದ ರೈತರಿಗೆ 30 ಸಾವಿರಕ್ಕೂ ಹೆಚ್ಚು ಕೋಟಿ ನಷ್ಟ ಸಂಭವಿಸಿದೆ. ನಾವು ಕೇಂದ್ರ ಸರ್ಕಾರಕ್ಕೆ 4860 ಕೋಟಿ ಅನುದಾನ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಶುಭಮನ್ ಗಿಲ್ ಆರೋಗ್ಯದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಕೋಚ್ ದ್ರಾವಿಡ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಡಿ. ಸುಧಾಕರ್ ಮಾತನಾಡಿ, ಹಿರಿಯೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಅಭಿವೃದ್ಧಿಗಾಗಿ 45 ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ನಗರದಲ್ಲಿ ಬಸ್ ನಿಲ್ದಾಣ ಹಳೆಯದಾಗಿದ್ದು, ನೂತನ ಬಸ್ ನಿಲ್ದಾಣದ ಅವಶ್ಯಕತೆ ಇದೆ, ಹೀಗಾಗಿ ಅನುದಾನ ನೀಡುವಂತೆ ಸಿಎಂ ಗೆ ಬೇಡಿಕೆ ಇಟ್ಟರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿ ಕಪ್ಪುತಲೆ ಹುಳ ಬಿದ್ದು ತೆಂಗು ಹಾಳಾಗಿದೆ. ತೋಟಗಾರಿಕೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ತೆಂಗು ಬೆಳೆ ಕಳೆದುಕೊಂಡ ರೈತರಿಗೆ ಆರ್ಥಿಕ ನೆರವು ನೀಡಬೇಕು. ತೆಂಗಿನ ಕಾಯಿ ಹಾಗೂ ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Shivamogga News: ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಗೆ ಶಿವಮೊಗ್ಗದ ಡಾ. ಆರ್. ಎಸ್. ವರುಣ್‌ಕುಮಾರ್ ಸೇರ್ಪಡೆ
ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಚಿವ ಎಚ್. ಏಕಾಂತಯ್ಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.