Site icon Vistara News

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Arecanut cultivation

ಚಳ್ಳಕೆರೆ: ಬರಗಾಲಕ್ಕೆ ತುತ್ತಾದ ಚಳ್ಳಕೆರೆ ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ (Arecanut Cultivation). ಸಾವಿರಾರು ಹೆಕ್ಟೇರ್​ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್​ವೆಲ್​ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.

ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಎಷ್ಟು ಬೋರ್ ಕೊರೆಯಿಸಿದರು. ನೀರು ಬರುತ್ತಿಲ್ಲ.
ಇನ್ನು ಒಂದು ತಿಂಗಳ ಕಾಲ ಭೂಮಿಗೆ ಮಳೆ ಬಾರದಿದ್ದರೆ ಅದೆಷ್ಟೋ ಅಡಿಕೆ ತೋಟಗಳು ಒಣಗಿ ಹೋಗುತ್ತವೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ತಾಲೂಕಿನ ಕಾಪರಹಳ್ಳಿ ಗ್ರಾಮದ ಗುರುಸ್ವಾಮಿ ರೈತ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ಬೆಳೆ ಸಂಪೂರ್ಣ ಒಣಗುತ್ತಿದೆ.

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

-ಅರವಿಂದ ಸಿಗದಾಳ್, ಮೇಲುಕೊಪ್ಪ

ಅಡಿಕೆ ಹಳದಿ ರೋಗಕ್ಕೆ ಕಾರಣ ಮತ್ತು ಔಷಧಿ (Areca Agriculture) ಎರಡೂ ಇನ್ನು ಪ್ರಶ್ನೆಯಾಗಿಯೇ ಉಳಿದಿವೆ. ಅಡಿಕೆ ಎಲೆ ಚುಕ್ಕಿ ರೋಗ ನಿರ್ದಿಷ್ಟ ಫಂಗಸ್‌ಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಾರಣ ಎಂದು ಗೊತ್ತಾಗಿದ್ದರೂ, ರೋಗಕ್ಕೆ ಇನ್ನೂ ಔಷಧಿಯನ್ನು ಕಂಡು ಹಿಡಿದಿಲ್ಲ. ಅನೇಕ ಫಂಗಿಸೈಡ್‌ಗಳನ್ನು ಪ್ರಯೋಗಿಸಿ ರೋಗದ ನಿಯಂತ್ರಣ ಪ್ರಯತ್ನ-ಪ್ರಯೋಗ ನೆಡೆಯುತ್ತಿದೆ. ರೋಗ ಬಂದ ಮೇಲೆ ಔಷಧಿ ಕೊಡುವ ಪ್ರಯತ್ನಗಳು ಸಹಜ ಮತ್ತು ಅಗತ್ಯ ಕೂಡ. ಅದರ ಜೊತೆಗೆ ರೋಗಗಳಿಗೆ ಕಾರಣವಾಗುವ ಮೂಲ ಯಾವುದು ಎಂಬ ಅಧ್ಯಯನ ಮತ್ತು ಪ್ರಯೋಗಗಳು ನಡೆಯಬೇಕು. ಆದರೆ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಗಳ ವಿಚಾರದಲ್ಲಿ ಈ ಕಾರಣ ಕಂಡುಹಿಡಿಯುವ ಅಧ್ಯಯನ ಮತ್ತು ಪ್ರಯೋಗಗಳು ತಳ ಮಟ್ಟದಿಂದ ತೀವ್ರಗತಿಯಲ್ಲಿ ನಡೆಯುತ್ತಿಲ್ಲ.

ಹವಾಮಾನ ವೈಪರೀತ್ಯ ಪರಿಣಾಮ, ಮಣ್ಣು-ನೀರು-ಗಾಳಿ-ಅಡಿಕೆ ಮರದ ಒಳ ಭಾಗದಲ್ಲಿ ಆಗುತ್ತಿರುವ pH ವ್ಯತ್ಯಾಸ, ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆ, ಅದಕ್ಕೆ ಕಾರಣವಾಗುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸಾವಯವ ಇಂಗಾಲದ ಕೊರತೆ, ಪ್ರತಿಯೊಂದು ರೋಗದ ಲಕ್ಷಣ ಕಂಡಾಗಲೂ ಬಳಸುತ್ತಿರುವ ಅತಿಯಾದ ವಿಷ ಪೂರಿತ ಔಷಧಿಗಳು, ಬಳಸುತ್ತಿರುವ ಕಳೆ ನಾಶಕಗಳು, ಹೆಚ್ಚು ಇಳುವರಿ ಬಯಕೆಯಿಂದ ಮಾಡುತ್ತಿರುವ ಬೇಸಾಯ ಪದ್ದತಿಗಳು, ಇವೆಲ್ಲವುಗಳಿಂದ ಆಗುತ್ತಿರುವ ಪರಿಣಾಮ ಇವತ್ತು ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಡಿಕೆಗೆ ರೋಗಗಳು ಹೆಚ್ಚುತ್ತಿವೆ. ಆರೋಗ್ಯವಂತ ಅಡಿಕೆ ತೋಟಗಳಲ್ಲಿ ಸಾಂಪ್ರದಾಯಕವಾಗಿ ಬೇಸಾಯ ಮಾಡುವಾಗ ಸರಾಸರಿ ಎಕರೆಗೆ 12 ಕ್ವಿಂಟಾಲ್ ಬರುತ್ತಿದ್ದ ಅಡಿಕೆ ಈಗ ಆರೋಗ್ಯವಿರುವಂತೆ ಕಾಣುವ ತೋಟದಲ್ಲೂ ಸರಾಸರಿ 7-8 ಕ್ವಿಂಟಾಲ್ ಮೇಲೆ ಬರುತ್ತಿಲ್ಲ. ಹಳದಿ ಎಲೆ ರೋಗ ಬಂದಲ್ಲಿ ಇಳುವರಿ 2-3 ಕ್ವಿಂಟಾಲಿಗೆ ಇಳಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ ಎರಡೂ ಇರುವಲ್ಲಿ ಎಕರೆಗೆ ಕ್ವಿಂಟಾಲ್ ಇರಲಿ, 60-70 ಕೆಜಿ ಅಡಿಕೆಯೂ ಆಗುತ್ತಿಲ್ಲ!

ವಯಸ್ಸಾದಂತೆ ರೋಗ

ಹೇಗೆ ಮನುಷ್ಯರಲ್ಲಿ 35ನೇ ವಯಸ್ಸಿನಲ್ಲಿ ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತಹ ಶಾಶ್ವತ ರೋಗಗಳು ಬರುವಂತೆ ಅಡಿಕೆ ತೆಂಗು ಮರಗಳಿಗೂ, ಸಾಮರ್ಥ್ಯ ಕಮ್ಮಿಯಾಗುವ, ರೊಗಗಳಿಗೆ ಬಲಿಯಾಗುವ, ಇಳುವರಿ ಕಮ್ಮಿಯಾಗುವ ಸ್ಥಿತಿ ಉಂಟಾಗುತ್ತಿವೆ. ಕಡಿಮೆ ಇಳುವರಿಯ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತೆ ಇಳುವರಿ ಕಡಿಮೆಯಾಗುವುದು ಶಾಶ್ವತ ಸಮಸ್ಯೆ ಆಗುತ್ತಿದೆ.
ಅತಿ ರಾಸಾಯನಿಕ ಬಳಕೆ, ಕೀಟನಾಶಕಗಳು, ಕ್ರಿಮಿನಾಶಕಗಳು, ರೋಗಗಳಿಗೆ ಕೊಡುತ್ತಿರುವ ರಾಸಾಯನಿಕ ಔಷಧಿಗಳು, ಕಡಿಮೆ ಆಗುತ್ತಿರುವ ಕೊಟ್ಟಿಗೆ ಗೊಬ್ಬರಗಳು, ಅವಜ್ಞಾನಿಕ ಕೃತಕ ಸಾವಯವ ಗೊಬ್ಬರ ಬಳಕೆಗಳ ನಡುವೆ ಸ್ವಾಭಾವಿಕವಾಗಿ ಉತ್ಪಾದನೆಗೊಳ್ಳುವ ಸಾವಯವ ಇಂಗಾಲದ ಕೊರತೆ ಅಡಿಕೆ ರೋಗಗಳಿಗೆ ಒಂದು ಪ್ರಮುಖ ಕಾರಣವಾಗಿದೆ.

ಏನಿದು ಸಾವಯವ ಇಂಗಾಲ?

ಸರಳವಾಗಿ ಹೇಳುವುದಾದರೆ, ಪರಿಸರದಲ್ಲೇ ಇರುವ ಸಾವಯವ ವಸ್ತುಗಳು ಮತ್ತು ತ್ಯಾಜ್ಯಗಳು ಕೊಳೆಯುವುದರಿಂದ ಸಾವಯವ ಇಂಗಾಲ ಉತ್ಪತ್ತಿಯಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು ಗಿಡಗಳ ಬೆಳವಣಿಗೆಗೆ ಸಾವಯವ ಇಂಗಾಲ ಒಂದು ಪ್ರಮುಖ ಅಂಶ. ಗಿಡಗಳ ಆರೋಗ್ಯಕ್ಕೆ, ಉತ್ತಮ ಇಳುವರಿಗೆ, ಮಣ್ಣಿನ ಆರೋಗ್ಯಕ್ಕೆ ಈ ಸಾವಯವ ಇಂಗಾಲ ಅತ್ಯಗತ್ಯ. ಪರಿಸರದಲ್ಲಿ ಸಹಜವಾಗಿ ನೆಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಈ ಸಾವಯವ ಇಂಗಾಲ ಉತ್ಪಾದನೆಯೂ ಒಂದು. ಮಣ್ಣಿನಲ್ಲಿ ತನ್ನಿಂದ ತಾನೆ ಉತ್ಪತ್ತಿಯಾಗುವ ಅನೇಕ ಜೀವಾಣುಗಳಿಗೆ ಆಹಾರವೂ ಈ ಸಾವಯವ ಇಂಗಾಲ. ಸಾವಯವ ಇಂಗಾಲಯುಕ್ತ ಮಣ್ಣು ಎಲ್ಲ ಸೂಕ್ಷ್ಮ ಜೀವಿಗಳಿಗೂ, ಎರೆಹುಳು, ಏಡಿಯಂತಹ ಜೀವಿಗಳಿಗೂ ಆಧಾರ. ಸಾವಯವ ಇಂಗಾಲದಿಂದ ಮಣ್ಣಿನಲ್ಲಿ ಸದಾ ತೇವದಿಂದ ಕೂಡಿದ ತಂಪಾದ ನೆಲೆ ಉಂಟಾಗುತ್ತದೆ. ಇದು ಅಗತ್ಯವಿರುವ ಎಲ್ಲ ಸೂಕ್ಷ್ಮ ಜೀವಿಗಳಿಗೆ ನೆಲೆ ಕೂಡ.

ಜೀವಾಣುಗಳಿಗೆ ದಾಹ

ನಮ್ಮ ಮಣ್ಣಿನಲ್ಲಿ ಕೋಟ್ಯಂತರ ಜೀವಾಣುಗಳಿವೆ. ಆದರೆ, ಸಾವಯವ ಪದ್ಧತಿ ಬಿಟ್ಟು ರಾಸಾಯನಿಕ ಬಳಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಜೀವಾಣುಗಳು ಹಸಿವು, ದಾಹದಿಂದ ಬಳಲುತ್ತಿವೆ. ಆಹಾರ, ನೀರು ಮತ್ತು ನೆರಳಿಲ್ಲದೆ ಒಣಗುತ್ತಿವೆ, ನಾಶವಾಗುತ್ತಿವೆ. ಮಣ್ಣಿನ ಇಂಗಾಲದ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿವೆ.
ಮಣ್ಣು ಜೀವಿಗಳಿಗೆ ಸೂಕ್ತ ಆಹಾರ, ನೀರು ನೀಡಿ ಜೀವಿಗಳು ನೆಮ್ಮದಿಯಿಂದ ಬದುಕಿ, ಬೆಳೆಯಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ, ಅದರಲ್ಲೂ ಮುಖ್ಯವಾಗಿ ಕೃಷಿಕರ ಮೂಲ ಗುರಿಯಾಗಬೇಕು. ನೆಲದ ಮೇಲಿರುವ ನಮಗೆಲ್ಲರಿಗೂ ನೆಲದೊಳಗಿನ ಈ ಜೀವಿಗಳೇ ಆಧಾರ. ಇವಿಲ್ಲದೆ ನಾವಿಲ್ಲ. ಪೌಶ್ಟಿಕ ಆಹಾರ ಮತ್ತು ತಂಪಾದ ನೆಲೆಯನ್ನಷ್ಟೇ ಮಣ್ಣಿನ ಜೀವಾಣುಗಳು ನಮ್ಮಿಂದ ನಿರೀಕ್ಷಿಸುವುದು. ಈ ಮಣ್ಣುಜೀವಿಗಳು ಬದುಕುಳಿಯಲು ಸಮೃದ್ಧ ಆಹಾರ ಕೊಡಬೇಕು. ಎರೆಹುಳು ಮತ್ತಿತರ ಮಣ್ಣು ಜೀವಿಗಳಿಗೆ ಸಾವಯವ ಗೊಬ್ಬರವೇ ಉತ್ತಮ ಆಹಾರ. ಮಣ್ಣಲ್ಲಿ ಕೊಳೆತು ಕಳಿಯುವ ಈ ಗೊಬ್ಬರ ಮಣ್ಣುಜೀವಿಗಳಿಗೆ ಮೃಷ್ಟಾನ್ನದಂತೆ. ಬಳಿಕ ಇದುವೇ ನಮ್ಮ ನಿಮ್ಮೆಲ್ಲರ ಬೆಳೆಗಳನ್ನು ಕಾಯುವ, ಕಾಪಾಡುವ ಸಮೃದ್ಧ ಇಂಗಾಲವಾಗಿ ಮಾರ್ಪಡುತ್ತದೆ. ಈ ಇಂಗಾಲದಿಂದ ಮಣ್ಣು ಜೀವಿಗಳು ಬದುಕುಳಿಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. 
ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಕ್ರಮೇಣ ಗೊಬ್ಬರವನ್ನು ಗಿಡದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಈ ವೇಳೆ ಮಣ್ಣಿನ ಮೇಲ್ಪದರದಲ್ಲಿ ಹ್ಯೂಮಸ್ ರೂಪುಗೊಳ್ಳುತ್ತದೆ. ಈ ಹ್ಯೂಮಸ್ ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಮಣ್ಣುಗಳಲ್ಲಿ ಇಂಗಾಲಾಂಶ ಹೆಚ್ಚಾದಾಗ, ನಮ್ಮ ಹೊಲ ತೋಟಗಳು ಸಕಲ ಪೋಷಕಾಂಶಗಳನ್ನೂ ಒಳಗೊಂಡ ಶಕ್ತಿಕೇಂದ್ರಗಳಾಗುತ್ತವೆ.
ದರಗು, ಸೊಪ್ಪು, ಕತ್ತರಿಸಿ ಅಲ್ಲೇ ಬಿಟ್ಟ ಕಳೆ, ಹಳೇ ಅಡಿಕೆ ಮರ, ಕಸಿ ಮಾಡಿದ ಇತರೆ ಮರ-ರೆಂಬೆ-ಕೊಂಬೆಗಳು ಮಣ್ಣಿನಲ್ಲಿ ಕೊಳೆತು, ಮಣ್ಣುಸ್ನೇಹಿ ಜೀವಾಣುಗಳು ಅದನ್ನು ಸೇವಿಸಿ, ಜೀರ್ಣಿಸಿಕೊಂಡು ವಿಸರ್ಜಿಸಿದಾಗ ಮಣ್ಣಿನಲ್ಲಿ ಇಂಗಾಲ ಸೇರಿಸಿಕೊಳ್ಳುತ್ತದೆ.

ಮಣ್ಣಿನ ಇಂಗಾಲದ ಪ್ರಯೋಜನಗಳೇನು?

ಮುಖ್ಯವಾಗಿ ಇಂಗಾಲದ ಅಂಶ ಹೆಚ್ಚಾಗಿರುವ ಮಣ್ಣುಗಳಲ್ಲಿ ಇಳುವರಿಯಲ್ಲಿ ಸುಧಾರಣೆ ಕಾಣಬಹುದು. ಇಂಗಾಲ ಹೆಚ್ಚಾದರೆ, ಹೆಚ್ಚು ಪ್ರಮಾಣದಲ್ಲಿ ನೀರನ್ನು, ಪೋಷಕಾಂಶಗಳನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಿದ್ದಾಗ ಮಾತ್ರ ಅವು ಬಳಕೆಯಾಗುತ್ತದೆ. ಈ ಮೂಲಕ ಬಿಸಿಲು ಹೆಚ್ಚಿದ್ದಾಗಲೂ ಸಹ ಗಿಡಗಳಿಗೆ ಅಗತ್ಯ ತೇವಾಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಮಣ್ಣಲ್ಲಿನ ಸಾವಯವ ಇಂಗಾಲದ ಅಂಶ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇರಿಸುತ್ತದೆ. ಮಣ್ಣಿನ pH ಸಮತೋಲನ ಅಡಿಕೆ, ತೆಂಗು ಮತ್ತು ಎಲ್ಲ ರೀತಿಯ ಸಸ್ಯ, ಮರಗಳ ಸರ್ವತೋಮುಖ ಬೆಳವಣಿಗೆಗೆ, ಅಧಿಕ ಇಳುವರಿಗೆ ಪ್ರಮುಖ ಅಂಶವಾಗುತ್ತದೆ. ಇಂಗಾಲದ ಅಂಶವಿರುವ ಮಣ್ಣು ಇತರೆ ಮಣ್ಣುಗಳಿಗಿಂತ ಫಲವತ್ತಾಗಿರುತ್ತದೆ. ಸಾವಯವ ಇಂಗಾಲದ ಅಂಶ ಇರುವ ಮಣ್ಣಿನಲ್ಲಿ ಅತಿ ಮಳೆ ಆದಾಗ ಉಂಟಾಗಬಹುದಾದ ಮಣ್ಣು ಸವಕಳಿಯನ್ನು ತಪ್ಪಿಸುತ್ತದೆ. ಮಣ್ಣಲ್ಲಿನ ಸಾವಯವ ವಸ್ತುವೇ ಪ್ರಧಾನ ಅಂಶವಾಗಿದ್ದು, ಇದರಿಂದ ಮಣ್ಣಲ್ಲಿ ಹೆಚ್ಚಾಗುವ ಮಣ್ಣು ಜೀವಿಗಳು ಮಾಲಿನ್ಯಕಾರಕ ವಸ್ತುಗಳನ್ನು ಹೀರಿ ಮಣ್ಣಿನ ವಾತಾವರಣವನ್ನು ಶುದ್ಧಗೊಳಿಸುತ್ತವೆ.

(ಕೆಲವು ಹಿರಿಯ ಅಡಿಕೆ ಬೆಳೆಗಾರರ ಅಭಿಪ್ರಾಯ, ಅಂತರ್ಜಾಲದಲ್ಲಿ ಸಿಕ್ಕಿದ ವಿವಿಧ ಮಾಹಿತಿಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಲೇಖಕ ಮಾಡುತ್ತಿರುವ ಸಣ್ಣ ಮಟ್ಟದ ಪ್ರಾಯೋಗಿಕ ಅನುಭವಗಳ ಪಲಿತಾಂಶಗಳನ್ನು ಆಧರಿಸಿ ಸಂಕ್ಷೇಪಿಸಿ ಈ ಮಾಹಿತಿ ಬರಹ ಸಿದ್ಧಪಡಿಸಲಾಗಿದೆ. ಸಣ್ಣ ಮಟ್ಟದ ಪ್ರಾಯೋಗಿಕ ಅನುಭವ ಎಂದರೆ, ಕಳೆದ ಆರೇಳು ವರ್ಷಗಳಿಂದ ದರಗು, ಹಳು ಸೌರಿದ ತ್ಯಾಜ್ಯ, ಕೊನಮಟ್ಟೆ, ಒಣಗಿದ ಅಡಿಕೆ ಸಿಪ್ಪೆ, ಬಿದ್ದು ಹೋದ ಅಡಿಕೆ ಮರಗಳು, ಕಡಿದ ಕಾಫಿ-ಬಾಳೆ ಗಿಡಗಳ ತ್ಯಾಜ್ಯ, ಬೇಲಿ ಸೌರಿದ ತ್ಯಾಜ್ಯ, ಅಡಿಕೆ ಒಲೆ ಬೂದಿ, ಅಡಿಗೆ ಮನೆಯಲ್ಲಿ ಸೃಷ್ಟಿಗೊಂಡ ಹಸಿರು ತ್ಯಾಜ್ಯ, ಮೆಣಸಿನ ಕಾಳು ಬಿಡಿಸಿದ ಕರೆ….ಎಲ್ಲವನ್ನೂ ಅಡಿಕೆ ತೋಟಕ್ಕೆ ವಾಪಾಸ್ ಬಡಿಸಲಾಗುತ್ತಿದೆ! ಇದುವರೆಗೆ ಕಳೆ ನಾಶಕ ಬಳಸಿಲ್ಲ. ತೋಟಕ್ಕೆ ಬರುವವರು ಖಾಲಿ ಗುಟ್ಕಾ ಪ್ಲಾಸ್ಟಿಕ್ ಪೌಚ್‌ನ್ನೂ ಹಾಕದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ಬಂಧಗೊಳಿಸಲಾಗಿದೆ.)

ಕಾಫಿ ಸಿಪ್ಪೆ ಬಳಕೆ

ಇತ್ತೀಚೆಗೆ ಕೊಪ್ಪದ ಜೋಗಿಸರ ಸೂರ್ಯನಾರಾಯಣರವರು ಕಾಫಿ ಸಿಪ್ಪೆಯನ್ನೂ ಸಾವಯವ ಕಾರ್ಬನ್ ಹೆಚ್ಚಿಸಲು ಬಳಸಬಹುದು ಅಂತ ಪ್ರಾಯೋಗಿಕ ಅಧ್ಯಯನ ಮಾಡಿ ಸಲಹೆ ಕೊಟ್ಟಿದ್ದಾರೆ. ಅಡಿಕೆ ತ್ಯಾಜ್ಯ ವಸ್ತುಗಳ ಮರು ಬಳಕೆಯಿಂದ 30% ನಷ್ಟು NPK, ಇತರೆ ಪೋಷಕಾಂಶಗಳನ್ನು ಮತ್ತು ಹೆಚ್ಚಿನ ಇಂಗಾಲವನ್ನು ಉಚಿತವಾಗಿ ಪಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ನಿರೂಪಿಸಿದ್ದಾರೆ. ಉಳಿದಂತೆ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಅನೇಕ ಕ್ರಮಗಳಿವೆ. ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ, ಕಬ್ಬಿನ ಸಿಪ್ಪೆ, ತೆಂಗಿನ ನಾರುಗಳಿಂದ ತಯಾರಿಸುತ್ತಿರುವ ಪ್ರೆಸ್ ಮಡ್ ಗೊಬ್ಬರಗಳ ಬಳಕೆಯಿಂದಲೂ ಮಣ್ಣಿನ ಇಂಗಾಲದ ಅಂಶವನ್ನು ಹೆಚ್ಚಿಸಬಹುದು. (ಈಗ ಮಾರ್ಕೇಟ್‌ನಲ್ಲಿ ಮಸಾಲೆ ದೋಸೆಯಂತೆ ಅತಿ ಬೇಡಿಕೆ ಮತ್ತು ಪೂರೈಕೆಯಾಗುತ್ತಿರುವ , ಪ್ರೆಸ್ ಮಡ್ ಗೊಬ್ಬರಗಳನ್ನು ಹೆಚ್ಚಾಗಿ ಅವೈಜ್ಞಾನಿಕವಾಗಿ ತಯಾರಾಗುತ್ತಿದೆ!! ಬಳಸುವಾಗ ಇಲ್ಲೊಂದು ಜಾಗ್ರತೆ ಬೇಕು. ಇದರ ಬಗ್ಗೆ ಮುಂದಿನ ಸಂಚಿಕೆಯೊಂದರಲ್ಲಿ ನೋಡೋಣ)
ಅಂದ ಹಾಗೆ, ಅಡಿಕೆ ತೋಟದಲ್ಲಿ ಸಾವಯವ ಇಂಗಾಲದ ಪ್ರಮಾಣ 0.75% ಗಿಂತ ಹೆಚ್ಚಿರಬೇಕು. ಇಂಗಾಲದ ಪ್ರಮಾಣ 1% – 2% ಇದ್ದರೆ ಅಡಿಕೆ ಇಳುವರಿಗೆ ಮತ್ತು ರೋಗಗಳ ನಿಂತ್ರಣಕ್ಕೆ ಹೆಚ್ಚು ಸಹಕಾರಿ. ಕನಿಷ್ಟಪಕ್ಷ ಮೂರು ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿ, ನಮ್ಮ ತೋಟದ ಇಂಗಾಲದ ಪ್ರಮಾಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಅಂಕಿ ಅಂಶಗಳ ಮಾಹಿತಿ ಪ್ರಕಾರ ಕರ್ನಾಟಕದ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ 0.25% to 0.50% ಇದೆ. ಇರಬೇಕಾಗಿದ್ದು ಕನಿಷ್ಠ 0.75%!!!.

ಇದನ್ನೂ ಓದಿ | Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಹಾಗಾದರೆ, ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆ ಆಗುವುದು ಹೇಗೆ?

ಮುಖ್ಯವಾಗಿ, ತೋಟ-ಗದ್ದೆಗಳಲ್ಲಿ ಬೆಳೆದು ಹೊರಗೆ ತರುವ ಉತ್ಪನ್ನಗಳಿಂದಲೇ ಬಹುತೇಕ ಸಾವಯವ ಇಂಗಾಲ ನಮ್ಮ ಜಮೀನಿನಿಂದ ಹೊರ ಹೋಗುತ್ತವೆ. ಕೃಷಿ ಭೂಮಿಯಲ್ಲಿ ಸೃಷ್ಟಿಯಾಗುವ ವೇಸ್ಟ್‌ನ್ನು (ಕಬ್ಬಿನ ಜಲ್ಲೆ, ಕಳೆ, ಉತ್ಪನ್ನಗಳ ಸಿಪ್ಪೆ) ಕೃಷಿ ಭೂಮಿಯಿಂದ ಹೊರ ಸಾಗಿಸುವಿದರಿಂದ ಮಣ್ಣಿನ ಇಂಗಾಲ ಕಡಿಮೆಯಾಗುತ್ತದೆ. ಇನ್ನುಳಿದಂತೆ, ಉಷ್ಣತೆ ಏರಿಕೆಯಿಂದಲೂ ಮಣ್ಣಿನ ಕಾರ್ಬನ್ ಕಡಿಮೆ ಆಗುತ್ತದೆ. ಅತಿಯಾದ ಕೆಮಿಕಲ್ ಬಳಸುವಿಕೆಯಿಂದಲೂ ಇಂಗಾಲ ಕಡಿಮೆಯಾಗುತ್ತಿದೆ.
ನಗರ ಪ್ರದೇಶದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಸಮಸ್ಯೆಯಾದರೆ, ಗ್ರಾಮೀಣ ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗುತ್ತಿರುವುದು ಸಮಸ್ಯೆ! ಎರಡೂ ಮನುಷ್ಯನ ಬದುಕಿಗೆ ಮಾರಕ. ಆದರೆ, ಅದೇ ಆಗ್ತಾ ಇದೆ!
ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಿಸಲು ಗಂಭೀರ ಚಿಂತನೆ ಮತ್ತು ಅನುಷ್ಠಾನಕ್ಕೆ ರೈತರು ಮುಂದಾಗಬೇಕು.
ಪ್ರಯತ್ನ ಮಾಡೋಣ….

Exit mobile version