Site icon Vistara News

ಮುರುಘಾ ಶರಣರ ಕುರಿತ ಹೇಳಿಕೆ ಸೂಕ್ತ: ಬಿ.ಎಸ್‌.ಪರಮಶಿವಯ್ಯ ಸಮರ್ಥನೆ

ಮುರುಘಾ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಬಗ್ಗೆ ತಾವು ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ ಎಂದು ರಾಜ್ಯ ವೀರಶೈವ ಅಭಿವೃದ್ಧಿ ನಿಗಮ ಹಾಗೂ ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ ಸರ್ಮರ್ಥಿಸಿಕೊಂಡಿದ್ದಾರೆ.

ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಹೊರಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಮುರುಘಾ ಮಠಕ್ಕೆ ಸರ್ಪಭೂಷಣ ಶಿವಯೋಗಿಗಳ ಮಠದ ಸ್ವಾಮೀಜಿಯನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಬೇಕು ಎಂಬ ಪರಮಶಿವಯ್ಯ ಹೇಳಿಕೆಗೆ ಆಕ್ಷೇಪವಿದೆ ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ಜಿತೇಂದ್ರ ಎನ್.ಹುಲಿಕುಂಟೆ ಎಂದು ಹೇಳಿದ್ದರು. ಇದಕ್ಕೆ ಬಿ.ಎಸ್‌.ಪರಮಶಿವಯ್ಯ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಇದನ್ನೂ ಓದಿ | Mobile Clinic | ಹಳ್ಳಿಗಾಡಿನಲ್ಲಿ ಸಂಚರಿಸಲಿದೆ ಶಾರದಾದೇವಿ ಕಣ್ಣಿನ ಆಸ್ಪತ್ರೆ

ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದಿಂದ ಬೃಹನ್ಮಠದ ಮೇಲೆ ನಾಲ್ಕಾರು ಪ್ರಕರಣಗಳು ಇವೆ ಎಂದು ಜಿತೇಂದ್ರ ಅವರು ಆರೋಪಿಸಿದ್ದಾರೆ. ಅವು ಸ್ವಾಮೀಜಿಗಳ ವರ್ಗಾವಣೆಗೆ ಸಂಬಂಧಿಸಿದ್ದೇ ಹೊರತು ಬೃಹನ್ಮಠದ ಮೇಲೆ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ ಮತ್ತು ಟ್ರಸ್ಟ್‌ನಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದನ್ನು ಅರಿತು ಶಿವಮೂರ್ತಿ ಶರಣರೇ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಮಲ್ಲಿಕಾರ್ಜುನ ದೇವರನ್ನು ಬೃಹನ್ಮಠದ ದಸರಾ ಕಾರ್ಯಕ್ರಮಗಳಲ್ಲಿ ಹಾಗೂ ಅಸಂಖ್ಯ ಪ್ರಮಥಗಣಮೇಳ ಮುಂತಾದ ಎಲ್ಲ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಆಶೀರ್ವದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮುರುಘಾಶ್ರೀ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆಯ ಪ್ರಕರಣದಲ್ಲಿ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ‌ ಮತ್ತು ಟ್ರಸ್ಟ್ ಯಾವುದೇ ಪಾತ್ರ ವಹಿಸಿಲ್ಲ. ಶಿವಮೂರ್ತಿ ಶರಣರು ಟ್ರಸ್ಟ್ ಡೀಡ್‌ನ ನಿಯಮಾವಳಿಗಳ ಹೊರತಾಗಿ ಕೆಲವು ಆದೇಶಗಳನ್ನು ಮಾಡಿದಾಗ ಅವುಗಳನ್ನು ನಿಯಂತ್ರಿಸುವ ಸಲುವಾಗಿ ಸಂಭವಿಸಬಹುದಾದ ತೊಂದರೆಗಳನ್ನು ತಡೆಯುವ ಪ್ರಯತ್ನ ಟ್ರಸ್ಟ್‌ ಮಾಡಿದೆ. ಆದರೆ, ಶಿವಮೂರ್ತಿ ಶರಣರೇ ಟ್ರಸ್ಟ್‌ ಅನ್ನು ಕೂಡ ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಿ ಎಳೆದು ತಂದಿದ್ದಾರೆ ಎಂದು ತಿಳಿಸಿದ್ದಾರೆ.

ಭವ್ಯ ಪರಂಪರೆಯನ್ನು ಹೊಂದಿರುವ ಮುರುಘಾ ಮಠದ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಇಂತಹ ಮಠದ ಪೀಠಾಧಿಪತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಕಂಡುಬಂದ ವಿಚಾರಗಳು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಕುರಿತು ಸಮಾಜದ ಗಣ್ಯ ವ್ಯಕ್ತಿಗಳ ಮಾತುಗಳು ಸಮಾಜಕ್ಕೆ ಆಶಾಕಿರಣವಾಗಿರುತ್ತದೆ. ಇದನ್ನು ಸಹೃದಯದಿಂದ ಅವಲೋಕಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಚಿತ್ರದುರ್ಗದ ಮುರುಘಾ ಶರಣರ ಆಪ್ತ ಹಾಗೂ ಸಲಹಾ ಸಮಿತಿಯ ಸದಸ್ಯ ಜಿತೇಂದ್ರ ಎನ್.ಹುಲಿಕುಂಟೆ, ಸರಿಯಾದ ಮಾಹಿತಿ ಇಲ್ಲದೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದಿನ ಜಗದ್ಗುರುಗಳಾದ ಮಲ್ಲಿಕಾರ್ಜುನ ಮುರಘಾ ರಾಜೇಂದ್ರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಕೊಡಿಸಿದ್ದು ಸರ್ಪಭೂಷಣ ಟ್ರಸ್ಟ್‌ ಅಲ್ಲ. ಆದರೆ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿದವರನ್ನೇ ಶಿವಮೂರ್ತಿ ಶರಣರು ಒಳ ಒಪ್ಪಂದದ ಮೂಲಕ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠಕ್ಕೆ ನೇಮಕ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ, ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹಬ್ಬಿಸುವುದಕ್ಕೆ ಇವರಿಗೆ ಯಾರು ಅಧಿಕಾರ ಕೊಟ್ಟಿರುತ್ತಾರೆ? ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಅವಕಾಶಗಳಿವೆ. ಹೀಗಾಗಿ ಜಿತೇಂದ್ರ ಎನ್.ಹುಲಿಕುಂಟೆ ಸರಿಯಾದ ತಿಳಿವಳಿಕೆ ಪಡೆದು ಮಾತನಾಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ ಅಂತ್ಯ; ನ.8 ರವರೆಗೆ ನ್ಯಾಯಾಂಗ ಬಂಧನ

Exit mobile version