ಚಿತ್ರದುರ್ಗ: ನಟ ಪುನೀತ್ ರಾಜಕುಮಾರ್ ಅಗಲಿ ತಿಂಗಳುಗಳೇ ಕಳೆದಿವೆ. ಆದರೂ ಅವರ ಅಭಿಮಾನಿಗಳ ಮನದಲ್ಲಿನ ದುಃಖ ಮಾತ್ರ ಇನ್ನೂ ಆರಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಲೌಕಿಕ ಜ್ಞಾನವಿಲ್ಲದ ಹಾಗೂ ಕೈಕಾಲು ಸ್ವಾಧೀನವಿಲ್ಲದ ಅಣ್ಣ ತಂಗಿ, ಅಪ್ಪು ಧ್ಯಾನದಲ್ಲಿ ದಿನ ಕಳೆಯುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದ ನಾಗರಾಜ್ ಹಾಗು ನಾಗರತ್ನ ದಂಪತಿಯ ಮಕ್ಕಳು ರಂಗನಾಥ್ (26) ಮತ್ತು ರಂಜಿತ (23). ನಾಲ್ಕು ವರ್ಷದವರೆಗೂ ಎಲ್ಲ ಮಕ್ಕಳಂತೆ ಆರೋಗ್ಯವಾಗಿದ್ದರು. ನಾಲ್ಕು ವರ್ಷ ದಾಟುತಿದ್ದಂತೆ ಇಬ್ಬರಿಗೂ ಮೆದುಳು ಪಾರ್ಶ್ವವಾಯು ತಗುಲಿದೆ. ಹೀಗಾಗಿ ಇಷ್ಟು ವರ್ಷಗಳಿಂದ ರಂಗನಾಥ್ ಮತ್ತು ರಂಜಿತಾಳನ್ನು ಚಿಕ್ಕ ಮಕ್ಕಳಂತೆ, ಹೆತ್ತವರೇ ಆರೈಕೆ ಮಾಡುತ್ತಿದ್ದಾರೆ.
ನಾನಾ ಕಡೆ ಈ ರೋಗಕ್ಕೆ ಚಿಕಿತ್ಸೆ ಕೊಡಿಸಿ ಸುಸ್ತಾಗಿರುವ ಪೋಷಕರು, ಕೊನೆ ಪಕ್ಷ, ಆ ಮುಗ್ದ ಮಕ್ಕಳ ಕೆಲವು ಆಸೆಗಳನ್ನಾದರೂ ಈಡೇರಿಸಿಬೇಕೆಂಬ ತವಕದಲ್ಲಿದ್ದಾರೆ. ಅವರ ಉತ್ಕಟ ಆಸೆ ಎಂದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಶಿವ ರಾಜ್‌ಕುಮಾರ್ ಅವರನ್ನು ಭೇಟಿ ಮಾಡುವುದು. ಆದರೆ ಪುನೀತ್ ಭೇಟಿ ಸಾಧ್ಯವಾಗಲೇ ಇಲ್ಲ. ಪುನೀತ್ ಸಾವನ್ನಪ್ಪಿದಾಗ ಈ ಮುಗ್ದರು ಎರಡು ದಿನ ಊಟವನ್ನೇ ಮಾಡಿರಲಿಲ್ಲ. ಆಗ ಹೆತ್ತವರು ಸಂತೈಸಿದ್ದರು. ಆದರೂ ಪ್ರತಿದಿನ ಅಪ್ಪು ಹಾಗು ಶಿವಣ್ಣನ ಧ್ಯಾನ ಮಾಡುತ್ತಾ ದಿನಕಳೆಯುತಿದ್ದಾರೆ.
ಈ ಕುರಿತು ಮಾತನಾಡಿದ ಮಕ್ಕಳ ತಾಯಿ, ಅಪ್ಪು ಅವರು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಅಗಲುತ್ತಾರೆಂದು ನಾವು ಭಾವಿಸಿರಲಿಲ್ಲ. ನಮ್ಮ ಮಕ್ಕಳಿಗೆ ಅವರನ್ನು ತೋರಿಸುವ ಭಾಗ್ಯ ಸಿಗಲಿಲ್ಲ. ಹೀಗಾಗಿ ಒಮ್ಮೆಯಾದರೂ ಅಪ್ಪು ಅವರ ಸಮಾಧಿ ದರ್ಶನ ಮಾಡಬೇಕು. ಹಾಗೂ ನಟ ಶಿವರಾಜ್ ಕುಮಾರ್ ಅವರನ್ನಾದರೂ ಭೇಟಿ ಮಾಡಿಸಿ, ನನ್ನ ಮುಗ್ದ ಮಕ್ಕಳ ಇಷ್ಟಾರ್ಥ ನೆರೆವೇರಿಸಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ| Puneeth Rajkumar: ಮೌಂಟ್ ಎವರೆಸ್ಟ್ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು