ಚಳ್ಳಕೆರೆ: ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್ ಬದಲು ನೀರನ್ನು ತುಂಬಿಸಿ ಮಾರಾಟ ಮಾಡಿ, ಜನರಿಗೆ ವಂಚಿಸುತ್ತಿರುವ ಪ್ರಕರಣ ಚಳ್ಳಕೆರೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿದ ಗ್ರಾಹಕರಿಗೆ ದಿನಗಟ್ಟಲೆ ಸತಾಯಿಸಿ, ವಾಪಸು (Chitradurga News) ಕಳಿಸಲಾಗಿದೆ.
ಚಳ್ಳಕೆರೆ ನಗರದ ಕೈಲಾಸ್ ಗ್ಯಾಸ್ ಏಜೆನ್ಸಿಯಿಂದ ಇಂತದ್ದೊಂದು ಮೋಸ ನಡೆಯುತ್ತಿದೆ. ಗ್ಯಾಸ್ ಸಿಲಿಂಡರ್ ಅನ್ನು ಮನೆಗಳಿಗೆ ವಿತರಿಸುವಾಗ ಗ್ರಾಹಕರ ಎದುರೇ ಅದನ್ನು ತೂಕ ಹಾಕಬೇಕು ಎನ್ನುವ ನಿಯಮವಿದೆ. ಆದರೆ ಈ ಏಜೆನ್ಸಿಯ ಮುಖ್ಯಸ್ಥ ಶಂಕರ್ ಲಿಂಗಯ್ಯ ಈ ನಿಯಮವನ್ನು ಗಾಳಿಗೆ ತೂರಿದ್ದಾರೆ. ಹಾಗೆಯೇ ಸಾಮಾನ್ಯವಾಗಿ ತಿಂಗಳ ಕಾಲ ಬರಬೇಕಾದ ಗ್ಯಾಸ್ 15-20 ದಿನಗಳಲ್ಲೇ ಖಾಲಿಯಾಗುತ್ತಿದ್ದು, ಅನುಮಾನ ಬಂದ ಗ್ರಾಹಕರು ಪರಿಶೀಲನೆ ಮಾಡಿದಾಗ ಗ್ಯಾಸ್ ಸಿಲಿಂಡರ್‌ನಲ್ಲಿ ನೀರು ತುಂಬಿರುವುದು ತಿಳಿದುಬಂದಿದೆ.
ಇದನ್ನೂ ಓದಿ: Road Accident: ಚಳ್ಳಕೆರೆಯ ಹಿರೇಹಳ್ಳಿ ಬಳಿ ಕಾರು ಪಲ್ಟಿ; ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಸಾವು
ಈ ವಿಚಾರವಾಗಿ ಹೊಟ್ಟೆಪ್ಪನಹಳ್ಳಿ ಗ್ರಾಮದ ಸಿದ್ದಲಿಂಗಮ್ಮ ಹೆಸರಿನ ಗೃಹಿಣಿ ಏಜೆನ್ಸಿಗೆ ಬಂದು ಪ್ರಶ್ನಿಸಿದಾಗ ಶಂಕರ್ ಲಿಂಗಯ್ಯ ಅವರು ದಿನಗಟ್ಟಲೆ ಅವರನ್ನು ಕಾಯಿಸಿ, ಸತಾಯಿಸಿ ನಂತರ ವಾಪಸು ಕಳಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಸಿದ್ದಲಿಂಗಮ್ಮ ಅವರು ಈ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದು, ಶಂಕರ್ ಲಿಂಗಯ್ಯ ಮಾಧ್ಯಮದವರಿಗೆ ಮುಖ ತೋರಿಸದಿರಲು ಯತ್ನಿಸಿದ್ದಾನೆ. ಮತ್ತು ಉಡಾಫೆ ಉತ್ತರಗಳನ್ನು ಕೊಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಏಜೆನ್ಸಿಯವರಿಗೆ ಒಂದು ಸಿಲಿಂಡರ್ ವಿತರಣೆ ಮಾಡುವುದರಿಂದ 50-55 ರೂಪಾಯಿ ಆದಾಯ ಬರುತ್ತದೆ. ಆದರೂ ಅದು ಸಾಲದೆಂದು ಇದೀಗ ನೀರು ತುಂಬಿಸಿ ಮಾರಾಟ ಮಾಡುವ ದಂಧೆ ಆರಂಭಿಸಿದ್ದಾರೆ. ಏಜೆನ್ಸಿ ಪ್ರತಿ ಸಿಲಿಂಡರ್‌ನಲ್ಲಿ ಮೂರರಿಂದ ನಾಲ್ಕು ಕೆಜಿಯಾಗುವಷ್ಟು ನೀರು ತುಂಬಿಸುತ್ತಿದ್ದಾರೆ. ಇನ್ನೂ ಕೆಲವು ಸಿಲಿಂಡರ್‌ಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ನೀರು ತುಂಬಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಲಾರಂಭಿಸಿದ್ದಾರೆ.