ಚಳ್ಳಕೆರೆ: ತಾಲೂಕಿನ ಬೆಳಗೆರೆ ಕೆರೆ ಸಮೀಪ ಇರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ (Chitradurga News) ಶನಿವಾರದಂದು ಮುಕ್ತಾಯವಾಯಿತು. ಮಾರ್ಚ್ 3ರಿಂದ ಆರಂಭವಾಗಿದ್ದ ಜಾತ್ರಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
ದೇವಸ್ಥಾನ ಮರು ನಿರ್ಮಾಣ ಹಾಗೂ ಹಲವು ಕಾರಣಗಳಿಂದ ಕಳೆದ 9 ವರ್ಷಗಳಿಂದ ಜಾತ್ರೆ ನಡೆಸಲಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಈ ವರ್ಷ ಅತ್ಯಂತ ಅದ್ಧೂರಿಯಾಗಿ ಜಾತ್ರೆ ನಡೆಸಲಾಗಿದೆ. ಬ್ರಹ್ಮರಥೋತ್ಸವಕ್ಕೂ ಮುನ್ನ ನೂತನವಾಗಿ ನಿರ್ಮಾಣಗೊಂಡ ರಥವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ನಂತರ ಸ್ವಾಮಿಯನ್ನು ದೇವಸ್ಥಾನದಿಂದ ಮೆರವಣಿಗೆಯ ಮೂಲಕ ರಥದಲ್ಲಿ ತಂದು ಕೂರಿಸಲಾಯಿತು.
ಜಾತ್ರೆಯ ಕೊನೆಯ ದಿನವಾದ ಶನಿವಾರ ಸ್ವಾಮಿಗೆ ಬೆಳಗ್ಗೆಯಿಂದಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಜೈಕಾರದ ನಡುವೆ ಸ್ವಾಮಿಯನ್ನು ರಥದಲ್ಲಿ ಕೂರಿಸಿ ಸ್ವಾಮಿಯ ರಥವನ್ನು ಎಳೆಯಲಾಯಿತು. ಜಾತ್ರೆಗೆ ಆಗಮಿಸಿದ ಶಾಸಕ ಟಿ. ರಘುಮೂರ್ತಿ ಈ ಬಾರಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿ, ರಥದ ಗಾಲಿಗೆ ಕಾಯಿ ಹಾಕುವುದರ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು. ಚಿತ್ರದುರ್ಗ, ತುಮಕೂರು, ಆಂಧ್ರ ಪ್ರದೇಶ ಸೇರಿ ವಿವಿಧ ಕಡೆಯಿಂದ ಭಕ್ತರು ಈ ಜಾತ್ರೆಗೆ ಆಗಮಿಸಿದ್ದರು.
ಇದನ್ನೂ ಓದಿ: Road Accident: ಚಳ್ಳಕೆರೆಯ ಹಿರೇಹಳ್ಳಿ ಬಳಿ ಕಾರು ಪಲ್ಟಿ; ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಸಾವು
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ವಿಧಾನಸಭಾ ಕ್ಷೇತ್ರದ ಪಕ್ಷೇತರ ಮುಖಂಡ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹಾಗೂ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜೀರ್ಣೋದ್ಧಾರ ಸಂಸ್ಥೆಯ ಅಧ್ಯಕ್ಷ ಕೆ.ಟಿ. ನಿಜಲಿಂಗಪ್ಪ ಹಾಗೂ ಪದಾಧಿಕಾರಿಗಳಾದ ಶ್ರೀಧರ್ ರಾಜಣ್ಣ ಟಿಡಿಎಲ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಈ ಮಧು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ರವಿ ಗ್ರಾಮ ಪಂಚಾಯಿತಿ ಸದಸ್ಯರು ಬೆಳಗೆರೆ ಗ್ರಾಮದ ಮುಖಂಡರು ಹಾಗೂ ದೇವಸ್ಥಾನದ ಪೂಜಾರಿ ವಂಶಸ್ಥರು ಗುಡಿ ಗೌಡರು ನಾರಾಯಣಪುರ ಗ್ರಾಮಸ್ಥರು, ವಿವಿಧ ಗ್ರಾಮದ ಮುಖಂಡರು ಕೂಡ ಜಾತ್ರೆಯಲ್ಲಿ ಭಾಗಿಯಾಗಿದ್ದರು.