Site icon Vistara News

Chitradurga News: ಹೊಳಲ್ಕೆರೆಯ ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಮನವಿ

Memorandum to DC Divya prabhu for demanding clearance of Kataiyya lake encroachment of Holalkere

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಪ್ಪರಸನಹಳ್ಳಿ ಗ್ರಾಮದ ರೈತರು ತಮ್ಮ ಗ್ರಾಮದಲ್ಲಿರುವ ಕಾಟಯ್ಯನ ಕೆರೆಯ (Lake Encroachment) ಒತ್ತುವರಿ ತೆರವುಗೊಳಿಸಿ, ಏರಿ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಗ್ರಾಮದ ಕಾಟಯ್ಯನ ಕೆರೆ ಅಂಗಳದ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದ ಅಪ್ಪರಸನಹಳ್ಳಿ ಗ್ರಾಮದ ರೈತರು, ಕೆರೆಯನ್ನು ಅಳತೆ ಮಾಡಿಸಿ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಕೆರೆ ಸುತ್ತ ಏರಿ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕೆರೆ ಏರಿ ಶಿಥಿಲಗೊಂಡಿದ್ದು, ಏರಿಯು ಅಪಾಯ ಮಟ್ಟದಲ್ಲಿದೆ. ಆದ್ದರಿಂದ ಏರಿಯನ್ನು ಬಂದೊಬಸ್ತು ಮಾಡಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Karnataka Weather: ಇನ್ನೊಂದು ವಾರ ಬೆಳಗ್ಗೆ ಬಿಸಿಲು, ರಾತ್ರಿ ಚಳಿ! ದಕ್ಷಿಣ ಒಳನಾಡಲ್ಲಿ 5 ಡಿಗ್ರಿ ಬಿಸಿಲು ಹೆಚ್ಚಳ?

ಕೆರೆ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ಹೊಳಲ್ಕೆರೆ ತಾಲೂಕು ಕಚೇರಿ, ಕೆರೆ ಪ್ರಾಧಿಕಾರ, ಜಿಲ್ಲಾ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು ಕೂಡ ಕ್ರಮ ತೆಗೆದುಕೊಂಡಿಲ್ಲ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. 8 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಕೆರೆಗಳು ಸಾರ್ವಜನಿಕರ ಸ್ವತ್ತು. ಅವುಗಳನ್ನು ಒತ್ತುವರಿ ಮಾಡುವುದು ತಪ್ಪು. ಕೆರೆಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅಧಿಕಾರಿಗಳಿಗೂ ಅದರ ಜವಾಬ್ದಾರಿ ಇದೆ. ಹೀಗಾಗಿ ಒತ್ತುವರಿಯಾಗಿರುವ ಕೆರೆಗಳನ್ನು ಅಳತೆ ಮಾಡುವುದಕ್ಕೆ ಸೂಚಿಸಿದ್ದೇವೆ. ತಿಂಗಳಿಗೆ ಇಂತಿಷ್ಟು ಕೆರೆ ಸರ್ವೇ ಮಾಡಬೇಕೆಂದು ಗುರಿ ಇಟ್ಟುಕೊಂಡಿದ್ದೇವೆ. ಆದ್ಯತೆ ಮೇರೆಗೆ ನಿಮ್ಮ ಊರಿನ ಕೆರೆಯನ್ನು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: Stress Relieving Foods: ಒತ್ತಡ ನಿವಾರಣೆಗೆ ನೆರವಾಗುವ ಆಹಾರಗಳಿವು

ಈ ವೇಳೆ ಗ್ರಾಪಂ ಸದಸ್ಯ ದಯಾನಂದ್, ಅಪ್ಪರಸನಹಳ್ಳಿ ಗ್ರಾಮದ ರೈತ ಮುಖಂಡ ಬಸವರಾಜಪ್ಪ, ಗ್ರಾಮದ ಮುಖಂಡರಾದ ಶಶಿಧರ್, ಜಗದೀಶ್, ಪರಮೇಶ್ವರಪ್ಪ, ಶಶಿಧರ್, ತಿಪ್ಪಯ್ಯ, ಬಸವಂತಪ್ಪ, ಲಿಂಗರಾಜು, ಜಿ.ಮಂಜುನಾಥ್, ಸಿದ್ದಯ್ಯ, ನಾಗರಾಜ್, ಯಶೋಧರ, ಸಂಗಯ್ಯ, ವೀರಯ್ಯ, ವೇದಮೂರ್ತಿ, ಮಹಾರುದ್ರಪ್ಪ ಹಾಗೂ ಅಪ್ಪರಸನಹಳ್ಳಿ ಗ್ರಾಮಸ್ಥರು ಇದ್ದರು.

Exit mobile version