Site icon Vistara News

Chitradurga News: ಏಪ್ರಿಲ್‌ 9ಕ್ಕೆ ಚಳ್ಳಕೆರೆಯಲ್ಲಿ ಜೆಡಿಎಸ್‌ನಿಂದ ಅದ್ಧೂರಿ ಪಂಚರತ್ನ ಯಾತ್ರೆ; ಎಂ.ರವೀಶ್ ಕುಮಾರ್

#image_title

ಚಳ್ಳಕೆರೆ: ಪಂಚರತ್ನ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಭಾನುವಾರ (ಏ. 9) ಬೆಳಗ್ಗೆ 11 ಗಂಟೆಗೆ ಪಂಚರತ್ನ ಯಾತ್ರೆ ಪ್ರಾರಂಭವಾಗುತ್ತದೆ ಎಂದು ಚಳ್ಳಕೆರೆ (Chitradurga News) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.

ನಗರದ ಬೆಂಗಳೂರು ರಸ್ತೆಯಲ್ಲಿರುವ ಬಸವರಾಜ್ ಮಂಡಿಮಠ ಅವರ ಎಣ್ಣೆ ಮಿಲ್ಲಿನಲ್ಲಿ ಪಂಚರತ್ನ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, “ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯು ಏಪ್ರಿಲ್ 9 ರಂದು ಬೆಳಗ್ಗೆ 11 ಗಂಟೆಗೆ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ತುರುವನೂರಿನಿಂದ ಪ್ರಾರಂಭವಾಗುತ್ತದೆ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೆಲಿಕಾಪ್ಟರ್‌ ಮೂಲಕ ಚಿತ್ರದುರ್ಗಕ್ಕೆ ಬಂದು ನಂತರ ಚಿತ್ರದುರ್ಗದಿಂದ ಕಾರಿನ ಮೂಲಕ ತುರುವನೂರು ಗ್ರಾಮದಲ್ಲಿ ಪಂಚರತ್ನ ಯಾತ್ರೆಯ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ತುರುವನೂರಿನಲ್ಲಿ ಪ್ರಚಾರ ನಡೆಸಿದ ನಂತರ ಕೂನ್‌ಬೇವು ಗ್ರಾಮಕ್ಕೆ ತಲುಪಲಿದ್ದಾರೆ. ನಂತರ ಅದೇ ಮಾರ್ಗವಾಗಿ ಬೆಳಗಟ್ಠ ಪೆಲೂರಹಟ್ಟಿ ರಾಮಜೋಗಿಹಳ್ಲಿ, ಬಾಲನಹಳ್ಳಿಯ ಮೂಲಕ ಬಾಲಿನಹಳ್ಳಿ, ಕುರುಡಿಹಳ್ಳಿ ಗೇಟ್, ಲಂಬಾಣಿಹಟ್ಟಿ, ಹಿಮಂಪುರ ಗೇಟ್ ನಂತರ ಚಳ್ಳಕೆರೆ ಆಗಮಿಸಿ ಚಳ್ಳಕೆರೆಯಿಂದ ಪರಶುರಾಮಪುರ ತಲುಪಲಿದ್ದಾರೆ. ಅಲ್ಲಿಂದ ಕ್ಯಾದಿಗುಂಟೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ವಾಪಸ್ ಪರಶುರಾಮಪುರಕ್ಕೆ ಬಂದು ಸಾರ್ವಜನಿಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ನಂತರ ಚಳ್ಳಗೆರೆಗೆ ಆಗಮಿಸಲಿದ್ದು, ಅಲ್ಲಿ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 6:45ಕ್ಕೆ ಬಳ್ಳಾರಿ ರಸ್ತೆಯಲ್ಲಿರುವ ಜಾಮಿಯ ಮಸೀದಿಯಲ್ಲಿ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಲಿದ್ದಾರೆ. ನಂತರ ನೆಹರು ಸರ್ಕಲ್‌ಗೆ ಬಂದು ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಆವರಣದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಬಹಿರಂಗ ಭಾಷಣ ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.

“ಈ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ಈ ಯಾತ್ರೆಗೆ ಚಳ್ಳಕೆರೆ ಜೆಡಿಎಸ್ ಪಕ್ಷದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾತ್ರೆಯಲ್ಲಿ ರೈತರು ತಮ್ಮ ಪ್ರೀತಿಯ ನಾಯಕರಾದ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಮಾಡಿರುವ ಪಟ್ಟಿಯ ಹಾರ, ತಾಳೆಕಾಯಿ ಹಾರ, ಹಾಲುಗೆಡ್ಡೆಯ ಹಾರ, ಎಲೆಕೋಸಿನ ಹಾರ ಹೀಗೆ ವಿವಿಧ ಹಾರಗಳನ್ನು ಹಾಕಲಿದ್ದಾರೆ” ಎಂದು ರವೀಶ್‌ ತಿಳಿಸಿದ್ದಾರೆ.

ಚಳ್ಳಕೆರೆ ತಾಲೂಕು ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ ಮಾತನಾಡಿ, “ಪಂಚರತ್ನ ಯಾತ್ರೆ ಈಗಾಗಲೇ ಇಲ್ಲಿಗೆ ಮುಂಚೆಯೇ ಆಗಮಿಸಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ತಡವಾಗಿ ನಮ್ಮ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದೆ. ಅದಕ್ಕೆಂದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Modi in Karnataka: ಮೈಸೂರಲ್ಲಿ ಮೋದಿ ಸಂಚಲನ; ನಾಳೆ ಹುಲಿಗಣತಿ ವರದಿ ಬಿಡುಗಡೆ; ಬಂಡೀಪುರದಲ್ಲಿ ಹುಲಿ ಸಫಾರಿ

ಈ ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಆನಂದಪ್ಪ, ನಗರಸಭೆ ಸದಸ್ಯರಾದ ಶ್ರೀನಿವಾಸ್ ವಿಶುಕುಮಾರ್ ಪ್ರಮೋದ್, ಮಾಜಿನಗರ ಸಭೆ ಸದಸ್ಯರಾದ ಲೋಕೇಶ್ ನಾಯ್ಕ್, ಜೆಡಿಎಸ್ ತಾಲೂಕು ಮಾಜಿ ಉಪಾಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಭೂ ಲಿಂಗಪ್ಪ, ಸಾಣಿಕೆರೆ ರಂಗನಾಥ್ ಶಿವಮೂರ್ತಿ, ಚನ್ನಿಗರಾಮಯ್ಯ ಪ್ರಸನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version