ಹೊಳಲ್ಕೆರೆ: ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ಹೊಳಲ್ಕೆರೆ ತಾಲೂಕು ಕಾಡುಗೊಲ್ಲರ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ (Protest) ನಡೆಸಲಾಯಿತು.
ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುತ್ತಾ ಪ್ರತಿಭಟನೆ ನಡೆಸುತ್ತಾ ಬಂದಿದೆ. ಬಹಳ ಪ್ರಮುಖವಾಗಿ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು. ಕಾಡುಗೊಲ್ಲ ಎಂಬ ಜಾತಿ ಪ್ರಮಾಣ ಪತ್ರವನ್ನು ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿ ವಿತರಣೆ ಮಾಡಬೇಕು.
ಶಾಲಾ ದಾಖಲಾತಿಯಲ್ಲಿ ಕಾಡುಗೊಲ್ಲರು ಎಂದು ಸೇರ್ಪಡೆ ಮಾಡಬೇಕು. ಕಾಡುಗೊಲ್ಲರಿಗೆ ಪ್ರತ್ಯೇಕವಾದ ಅಭಿವೃದ್ಧಿ ನಿಗಮವನ್ನು ಸರ್ಕಾರ ತೆರೆಯಬೇಕು. ಕಾಡುಗೊಲ್ಲರಿಗೆ ಪ್ರತ್ಯೇಕ ಜಾತಿಯ ಸ್ಥಾನಮಾನ ನೀಡುವುದರ ಜತೆಗೆ ಸರ್ಕಾರದ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರದ ವರದಿಯಂತೆ ಜಿಲ್ಲೆಯ ಗೊಲ್ಲರಹಟ್ಟಿಗಳನ್ನು ಕಾಡುಗೊಲ್ಲ, ಅಲೆಮಾರಿ, ಅರೆ ಅಲೆಮಾರಿ ಪಟ್ಟಿಗೆ ಸೇರ್ಪಡೆಗೊಳಿಸಲು ಶಿಫಾರಸ್ಸು ಮಾಡಬೇಕು. ಕಾಡುಗೊಲ್ಲ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಸಮುದಾಯ ಎಂದು ಸೇರ್ಪಡೆ ಮಾಡಬೇಕು.
ಇದನ್ನೂ ಓದಿ: Job Alert: ಬರೋಬ್ಬರಿ 75,768 ಕಾನ್‌ಸ್ಟೇಬಲ್ ಹುದ್ದೆಗಳಿಗೆ ನ.24ರಿಂದ ಅರ್ಜಿ ಸಲ್ಲಿಸಿ!
ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಜನಾಂಗಕ್ಕೆ ಎಸ್‌ಟಿ ಮೀಸಲಾತಿಗೆ ಒಳಪಡಿಸಲು ಕೈಗೊಂಡ ಕುಲ ಶಾಸ್ತ್ರೀಯ ಅಧ್ಯಯನವನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ಕೂಡಲೇ ವರದಿಯನ್ನು ಸ್ವೀಕರಿಸಿ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕು. ಕಾಡುಗೊಲ್ಲರ ಹಟ್ಟಿಗಳಿಗೆ ನಾಗರಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು ಸೇರಿದಂತೆ ತಮ್ಮ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ; ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ವಿ. ಉಮಾಪತಿ, ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಎ. ಚಿತ್ತಪ್ಪ, ಮುಖಂಡರಾದ ಡಿ.ಕೆ. ಶಿವಮೂರ್ತಿ, ಇಂದಿರಾ ಕಿರಣ್, ಕೆ.ಎಂ.ಹಾಲಸ್ವಾಮಿ, ಕಿರಣ್ ಯಾದವ್ ಮತ್ತು ವೈಶಾಖ್ ಯಾದವ್, ಅಮೃತಪುರ ಎನ್. ತಿಪ್ಪೇಸ್ವಾಮಿ, ಪಿ. ರಂಗಸ್ವಾಮಿ, ಬಸವರಾಜು ಯಾದವ್, ನಾಗರಾಜು ಯಾದವ್, ಸಿ. ಬಸವರಾಜ್, ಕೋಳಾಳ್ ದಾಸಪ್ಪ, ಕಂದವಾಡಿ ವೀರಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.