ಚಿತ್ರದುರ್ಗ: ಆಕಸ್ಮಿಕವಾಗಿ ತೊಟ್ಟಿಗೆ ಬಿದ್ದ ಮಗುವೊಂದು ನೀರಲ್ಲಿ ಮುಳುಗಿ (Drowned in water tank) ಮೃತಪಟ್ಟಿದೆ. ಚಿತ್ರದುರ್ಗ ತಾಲೂಕಿನ ಹಳಿಯಾರು ಗ್ರಾಮದಲ್ಲಿ ನಡೆದಿದೆ. ಒಂದೂವರೆ ವರ್ಷದ ಪಿಯಾ ಮೃತ ದುರ್ದೈವಿ.
ಮಹಾರಾಷ್ಟ್ರ ಮೂಲದ ದತ್ತಾ ಜಾಧವ್ ದಂಪತಿ ಚಿತ್ರದುರ್ಗದ ಹಳಿಯೂರಲ್ಲಿ ವಾಸವಿದ್ದರು. ಜಾಧವ್ ಇದ್ದಿಲು ಸುಡುವ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದರು. ದಂಪತಿಗೆ ಮುದ್ದಾದ ಒಂದೂವರೆ ವರ್ಷದ ಮಗುವಿತ್ತು. ಸುಖಸಂಸಾರಕ್ಕೆ ಕಿಚ್ಚು ಹಚ್ಚುವಂತಿತ್ತು. ಆದರೆ ಮುದ್ದಾದ ಮಗಳು ಆಟವಾಡುತ್ತಾ ತೆರೆದಿದ್ದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ.
ತುಂಬಾ ಸಮಯ ಪಿಯಾ ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಪಿಯಾಳನ್ನು ಕಂಡಿದ್ದಾರೆ. ಕೂಡಲೇ ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅದಾಗಲೇ ಪಿಯಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ತುಂಡಾದ ಆ್ಯಕ್ಸಲ್ ಬ್ಲೇಡ್; ಉರುಳುತ್ತಿದ್ದ ಬಸ್ಸನ್ನು ಹಿಡಿದು ನಿಲ್ಲಿಸಿದ ಆಪದ್ಭಾಂಧವರು
ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ಬೆಳಗಾವಿಯಲ್ಲಿ ಮನೆಯ ಗೋಡೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಡಲಾ ಅಂಕಲಗಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ಚೆನ್ನಪ್ಪ ಮಾಯಾಪ್ಪ ಕುರಬರ (45) ಮೃತ ದುರ್ದೈವಿ.
ಚೆನ್ನಪ್ಪ ಬೆಳಗಿನ ಸಮಯ ಮನೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ಕೆಳಗೆ ಬಿದ್ದ ಚೆನ್ನಪ್ಪ ಗಂಭೀರ ಗಾಯಗೊಂಡಿದ್ದಾರೆ. ದೊಡ್ಡ ಕಲ್ಲುಗಳು ಬಿದ್ದ ಪರಿಣಾಮ ಚೆನ್ನಪ್ಪ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕರೆಂಟ್ ಶಾಕ್ಗೆ ಲೈನ್ ಮ್ಯಾನ್ ಸಾವು
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಓಬಳಾಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮೃತಪಟ್ಟಿದ್ದಾರೆ. ರಾಂಪುರ ಬೆಸ್ಕಾಂ ಸ್ಟೇಶನ್ ಲೈನ್ ಮ್ಯಾನ್ ಮಲ್ಲಿಕಾರ್ಜುನಗೌಡ (35) ಮೃತ ದುರ್ದೈವಿ.
ರೈತರ ಜಮೀನಲ್ಲಿದ್ದ ವಿದ್ಯುತ್ ಕಂಬ ಹತ್ತಿದಾಗ ಒಮ್ಮೆಲೆ ಕರೆಂಟ್ ಶಾಕ್ ಹೊಡೆದಿದೆ. ಇದರಿಂದ ಮಲ್ಲಿಕಾರ್ಜುನ ಗೌಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಶಾಸಕ ಎನ್ ವೈ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ