ಚಿತ್ರದುರ್ಗ: ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿಧಾನಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೂಳಿಹಟ್ಟಿ ಶೇಖರ್ ಅವರು “ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸುವೆ” ಎಂದು ಹೇಳಿದ ಬಳಿಕ ಗೊಂದಲ ಉಂಟಾದ ಕಾರಣ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅವರು ಸ್ಪಷ್ಟನೆ ನೀಡಿದ್ದು, “ನನ್ನ ಹೇಳಿಕೆಯಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು” ಎಂದು ಮನವಿ ಮಾಡಿದ್ದಾರೆ.
“ನಾನು ಬಿಜೆಪಿ ಜತೆ ಹೊಂದಾಣಿಕೆ ಸಂದರ್ಭ ಬಂದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸುತ್ತೇನೆ ಎಂದು ಒಂದು ಸಂದರ್ಭದಲ್ಲಿ ಹೇಳಿದ್ದೇನೆ. ಹಾಗಾಗಿ, ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಯಾರೂ ತಪ್ಪು ತಿಳಿದುಕೊಳ್ಳಬಾರದು. ನಾನು ಸಂದರ್ಭಕ್ಕೆ ತಕ್ಕಹಾಗೆ ಅಂತ ಹೇಳಿದ್ದೇನೆಯೇ ಹೊರತು, ಚುನಾವಣೆ ಕಣದಿಂದ ಹಿಂದೆ ಸರಿಯುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಗೂಳಿಹಟ್ಟಿ ಶೇಖರ್ ಫೇಸ್‌ಬುಕ್ ಲೈವ್
“ನಾನು ರಾಜಿ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಅಂತಹ ಅನಿವಾರ್ಯ ಬಂದರೆ ನಾನು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೇನೆ. ಗೋವಿಂದಪ್ಪ ಅವರ ಹೆಸರು ಹೇಳಿದ ಮಾತ್ರಕ್ಕೆ ಅವರ ಜತೆ ಹೋಗುವುದಿಲ್ಲ. ನಾನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಬೇರೆ ಯಾರಿಗೂ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಹಾಗಾಗಿ, ದಯಮಾಡಿ ಜನ ತಪ್ಪು ತಿಳಿಯಬಾರದು” ಎಂದು ಫೇಸ್‌ಬುಕ್ ಲೈವ್ ಮೂಲಕ ಮನವಿ ಮಾಡಿದ್ದಾರೆ. ಬಿಜೆಪಿ ಜತೆ ಕೈಜೋಡಿಸುವ ಸಂದರ್ಭ ಬಂದರೆ ನಾನು ಕಾರ್ಯಕರ್ತರಿಂದ ಕಾಂಗ್ರೆಸ್‌ಗೆ ಮತ ಹಾಕಿಸುವೆ ಎಂದು ಗೂಳಿಹಟ್ಟಿ ಶೇಖರ್ ನೀಡಿದ ಹೇಳಿಕೆಯು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿತ್ತು. ಗೂಳಿಹಟ್ಟಿ ಶೇಖರ್ ಅವರು ಚುನಾವಣೆ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ: Goolihatti Shekhar: ಹೆಚ್ಚಾಗುತ್ತಿದೆ ಬಂಡಾಯ, ಬಿಜೆಪಿಗೆ ಗೂಳಿಹಟ್ಟಿ ಶೇಖರ್ ವಿದಾಯ
ಗೂಳಿಹಟ್ಟಿ ಶೇಖರ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡುವ ಮುನ್ನ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜನಾರ್ದನ ರೆಡ್ಡಿ ಅವರನ್ನೂ ಭೇಟಿಯಾಗಿದ್ದ ಗೂಳಿಹಟ್ಟಿ ಶೇಖರ್, ಅವರ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.