Site icon Vistara News

Hiriyur News : ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ವದ್ದಿಕೆರೆ ಸಿದ್ದಪ್ಪನ ರಥೋತ್ಸವ

#image_title

ಹಿರಿಯೂರು : ತಾಲೂಕಿನ ಐಮಂಗಳ ಹೋಬಳಿಯ ಶ್ರೀ ಕ್ಷೇತ್ರ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರನ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವೈಭವದಿಂದ (Hiriyur News) ನೆರವೇರಿತು.

ಇದನ್ನೂ ಓದಿ: Banavasi News : ಐತಿಹಾಸಿಕ ಬನವಾಸಿಯಲ್ಲಿ ಜರುಗಿದ ಅದ್ಧೂರಿ ಜಾತ್ರೆ
ರಥೋತ್ಸವಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳು ಚಾಲನೆ ನೀಡುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸಿದ್ದೇಶ್ವರನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.

ಭಕ್ತರು ದೇವರಿಗೆ ಅರ್ಪಿಸಿದ್ದ ದೊಡ್ಡ ದೊಡ್ಡ ಹೂವಿನ ಹಾರಗಳು ಹಾಗೂ ಹಲವು ರೀತಿಯ ಹೂವುಗಳಿಂದ ರಥವನ್ನು ಸಿಂಗಾರಗೊಳಿಸಲಾಗಿತ್ತು. ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮುಖಾಂತರ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯುದ್ದಕ್ಕೂ ವೀರಗಾಸೆ ನೃತ್ಯ, ಕಹಳೆ, ಮಂಗಳವಾದ್ಯಗಳು ಮೊಳಗಿದವು. ರಥಕ್ಕೆ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಬಲಿಭಾನದ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಪ್ರಾರಂಭವಾಯಿತು.

ರಥೋತ್ಸವಕ್ಕೆ ಬಂದಿದ್ದ ಭಕ್ತರು ಬಾಳೆಹಣ್ಣು, ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಭಾವ ಮೆರೆದರು. ಬಿರು ಬಿಸಿಲಿನಲ್ಲಿಯೂ ಸಹ ಭಕ್ತರು ಬಿಸಿಲಿನ ತಾಪ ಲೆಕ್ಕಿಸದೆ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಚಿತ್ರದುರ್ಗ, ಬಳ್ಳಾರಿ, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಟೋ, ಟ್ಯಾಕ್ಟರ್, ಬಸ್, ಕಾರು, ಎತ್ತಿನ ಗಾಡಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಬಂದು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Ramanagar News: ಜಾತ್ರೆಯಲ್ಲಿ ಕಳಸ ಹೊತ್ತೊಯ್ಯುತ್ತಿದ್ದ ಅರ್ಚಕ ಕುಸಿದು ಬಿದ್ದು ದಿಢೀರ್ ಸಾವು
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಚಂದ್ರಯ್ಯ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳು, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.

Exit mobile version