ಹಿರಿಯೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಜೋರಾಗಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಶಾಸಕಿಗೆ ಹತ್ತಿರವಾಗಿದ್ದ ತನ್ನ ಸಮುದಾಯದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕರಿಯಮ್ಮ ಹಾಗೂ ಅವರ ಪತಿ ದಿಂಡವಾರ ಶಿವಣ್ಣ ಮತ್ತು ಮಾಜಿ ನಗರಸಭಾ ಸದಸ್ಯ ಜಿ. ಪ್ರೇಮ್ ಕುಮಾರ್ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಪಕ್ಷ (Hiriyuru News) ಸೇರಿಕೊಂಡಿದ್ದಾರೆ.
ಪಕ್ಷಾಂತರಗೊಂಡ ಇಬ್ಬರೂ ನಾಯಕರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ಅವರು ಪಕ್ಷದ ಶಾಲು ಹಾಕಿ ಸ್ವಾಗತಿಸಿಕೊಂಡಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಈ ಇಬ್ಬರು ನಾಯಕರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಪೂರ್ಣಿಮಾ ಅವರ ಗೆಲುವಿಗೆ ಶ್ರಮಿಸಿದ್ದರು. ಕಾರಣಾಂತರಗಳಿಂದ ಶಾಸಕಿಯಿಂದ ಅಂತರ ಕಾಯ್ದುಕೊಂಡಿದ್ದ ಇಬ್ಬರು ನಾಯಕರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದರು. ಮಂಗಳವಾರ (ಏ. 4) ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಇದನ್ನೂ ಓದಿ: Road accident : ಹಿರಿಯೂರು ಬಳಿ ಬಸ್, ಟಾಟಾ ಏಸ್, ಲಾರಿಗಳ ಸರಣಿ ಅಪಘಾತ; ಒಬ್ಬ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಈ ಕುರಿತು ಮಾತನಾಡಿದ ಮಾಜಿ ಸಚಿವ ಡಿ.ಸುಧಾಕರ್ ಅವರು, “ಬಿಜೆಪಿ ಪಕ್ಷದ ದುರಾಡಳಿತ, ಬೆಲೆ ಏರಿಕೆ, ಜನಸಾಮಾನ್ಯರ ವಿರೋಧಿ ಆಡಳಿತ ನೋಡಿ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಸ್ಥಳೀಯ ಶಾಸಕರ ಆಡಳಿತ ಭ್ರಷ್ಟಾಚಾರಕ್ಕೆ ಬೇಸತ್ತಿರುವ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ದೊರಕಲಿದೆ” ಎಂದು ತಿಳಿಸಿದರು.
ಶಾಸಕಿಗೆ ಹಿನ್ನಡೆ:
ಹಿರಿಯೂರಿನಲ್ಲಿ ದಿನ ಕಳೆದಂತೆ ಬಿಜೆಪಿ ಪಕ್ಷಕ್ಕಿದ್ದ ಬೆಂಬಲದಲ್ಲಿ ಕುಸಿತ ಕಾಣುತ್ತಿದೆ. ಕ್ಷೇತ್ರದಲ್ಲಿ ದಿನ ಬೆಳಗಾದರೆ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದರಿಂದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ದೊಡ್ಡ ಹಿನ್ನಡೆ ಉಂಟಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಮಾಜಿ ನಗರಸಭೆ ಅಧ್ಯಕ್ಷ ಟಿ. ಚಂದ್ರಶೇಖರ್, ಎಸ್‌ಟಿ ಮೋರ್ಚಾದ ಅಧ್ಯಕ್ಷ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಮಾಜಿ ಜಿಪಂ ಸದಸ್ಯೆ ಕರಿಯಮ್ಮ, ಕಾಡುಗೊಲ್ಲ ಸಮುದಾಯ ಮುಖಂಡ ದಿಂಡವಾರ ಶಿವಣ್ಣ ಸೇರಿದಂತೆ ಮತ್ತಿತರರು ಪಕ್ಷ ತೊರೆದಿದ್ದಾರೆ.