ಚಿತ್ರದುರ್ಗ: ಇಸ್ರೋ (ISRO) ಮಗದೊಂದು ಸಾಧನೆ ಮಾಡಿದೆ. ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರುವ ರಾಕೆಟ್‌ಗಳು ಅಲ್ಲಿಯೇ ಸುಟ್ಟು ಭಸ್ಮವಾಗುವುದು ಎಲ್ಲರಿಗೂ ಅರಿವಿರುವ ವಿಚಾರ. ಆದರೆ ಇದೀಗ ಉಪಗ್ರಹವನ್ನು ಹೊತ್ತು ನಭಕ್ಕೆ ಜಿಗಿದು, ಕಕ್ಷೆಯಲ್ಲಿ ಅದನ್ನು ಬಿಟ್ಟು, ವಾಪಸು ಭೂಮಿಗೆ ಬರುವ ರಾಕೆಟ್ ಅನ್ನು ಭಾರತದ ಹೆಮ್ಮೆಯ ಇಸ್ರೋ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಅದರಲ್ಲೂ ನಮ್ಮ ಕರ್ನಾಟಕದ ಚಿತ್ರದುರ್ಗದ ಚಳ್ಳಕೆರೆಯಲ್ಲೇ ಈ ಪ್ರಯೋಗ ನಡೆದಿದೆ.
ಇದನ್ನೂ ಓದಿ: ISRO: ಇಸ್ರೋದಿಂದ ರಿಯೂಸೆಬಲ್ ಲಾಂಚ್ ವೆಹಿಕಲ್‌ನ ಅಟಾನಮಸ್ ಲ್ಯಾಂಡಿಂಗ್ ಪರೀಕ್ಷೆ ಸಕ್ಸೆಸ್!
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ಡಿಆರ್‌ಡಿಒ ವಾಯುನೆಲೆಯಲ್ಲಿ ಭಾನುವಾರ ಬೆಳಗ್ಗೆ ಇಂಥದ್ದೊಂದು ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ವೈಮಾನಿಕ ವಲಯ ಬರೋಬ್ಬರಿ 3,600 ಎಕರೆ ಪ್ರದೇಶದಲ್ಲಿದೆ. ಒಂದು ರೀತಿಯಲ್ಲಿ ಇದು ಅದೃಷ್ಟದ ನೆಲ ಎಂದೂ ಹೇಳಬಹುದು. ಏಕೆಂದರೆ ಇಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ವೈಮಾನಿಕ ಪ್ರಯೋಗಗಳು ನಡೆದಿದ್ದು, ಅವೆಲ್ಲವೂ ಯಶಸ್ವಿಯಾಗಿವೆ. ಪ್ರಸಿದ್ಧ ರುಸ್ತುಂ 1, ರುಸ್ತುಂ 2 ಕೂಡ ಇದೇ ನೆಲದಲ್ಲಿ ಯಶಸ್ವಿ ಪ್ರಯೋಗ ಕಂಡವು. ಅಷ್ಟೇ ಅಲ್ಲದೆ ತೇಜಸ್ ಯುದ್ಧ ವಿಮಾನ ಕೂಡ ಇಲ್ಲಿ ಯಶಸ್ವಿ ಹಾರಾಟ ಮಾಡಿತ್ತು.
ಮರುಬಳಸಬಹುದಾದ ಲಾಂಚಿಂಗ್ ವೆಹಿಕಲ್ ಸ್ವಾಯತ್ತ ಲ್ಯಾಂಡಿಂಗ್ ವಿಡಿಯೋ
ಸಂಭ್ರಮವೋ ಸಂಭ್ರಮ
ಅಂದ ಹಾಗೆ ಭಾನುವಾರ ನಡೆದ ಈ ಪ್ರಯೋಗದ ಹಿಂದೆ ಇಸ್ರೋದ ಸಾಕಷ್ಟು ಪರಿಶ್ರಮವಿತ್ತು. ಡಿಆರ್‌ಡಿಒ ಜತೆಗೂಡಿಕೊಂಡು ಇಸ್ರೋ ಕೈ ಹಾಕಿದ್ದ ಈ ಸಾಹಸಕ್ಕೆ ವಾಯುಪಡೆಯ ಪೈಲಟ್‌ಗಳು ಸರಿ ಸುಮಾರು ಒಂದು ತಿಂಗಳಿನಿಂದ ಸಹಕಾರ ಕೊಟ್ಟಿದ್ದರು. ಸ್ಥಳೀಯ ಏರೋನಾಟಿಕಲ್ ಟೆಸ್ಟ್ ರೇಂಜ್(ಎಟಿಆರ್) ಸಿಬ್ಬಂದಿ ರನ್ ವೇ ಮತ್ತು ಡಿಆರ್‌ಡಿಒ ಆವರಣದಲ್ಲಿ ಈ ಪ್ರಯೋಗಕ್ಕೆ ಬೇಕಾದಂತಹ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರು. ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು, ಅಹಮದಾಬಾದ್ ಸೇರಿ ಹಲವು ಕಡೆಗಳ ವಿಜ್ಞಾನಿಗಳು ಈ ಪ್ರಯೋಗಕ್ಕೆಂದೇ ತಿಂಗಳ ಮೊದಲು ಚಿತ್ರದುರ್ಗಕ್ಕೆ ಬಂದು ಕೆಲಸ ಆರಂಭಿಸಿದ್ದರು.
ಈ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆಯೇ ವಿಜ್ಞಾನಿಗಳು, ತಂತ್ರಜ್ಞರು ಸೇರಿ ಪ್ರತಿಯೊಬ್ಬರೂ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ, ಕುಣಿದು ಸಂಭ್ರಮವನ್ನು ಆಚರಿಸಿದ್ದಾರೆ. ಎಲ್ಲರಿಗೂ ಸಿಹಿಯನ್ನೂ ಹಂಚಲಾಗಿದೆ. ಇಸ್ರೋದ ಅಧ್ಯಕ್ಷರಾದ ಎಸ್.ಸೋಮನಾಥ ಅವರು ಈ ಪ್ರಯೋಗಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಅರ್ಪಿಸಿದರು. ಮುಖ್ಯ ಅಧಿಕಾರಿಗಳಾದ ಡಾ.ಎಸ್.ಉನ್ನೀಕೃಷ್ಣನ್, ಎನ್.ಶ್ಯಾಮ್ ಮೋಹನ್, ಡಾ.ಜಯಕುಮಾರ್, ಮುತ್ತುಪಾಂಡ್ಯನ್, ರಾಮಕೃಷ್ಣ ಮತ್ತಿತರರು ಪ್ರಯೋಗವನ್ನು ನೋಡಲೆಂದು ಬಂದಿದ್ದರು.