ಹಿರಿಯೂರು: ಸಾಮಾನ್ಯವಾಗಿ ಗ್ರಾಮಕ್ಕೆ ಯಾರಾದರೂ ಬಂದರೆ ತಮಟೆ ಹೊಡೆದು, ಉರಿಮೆ, ಪುಷ್ಪಾಮಾಲಿಕೆ ಹಾಕುವುದು, ಹೂ ಸುರಿಸುವುದು, ಪಟಾಕಿ ಸಿಡಿಸುವುದು, ಆರತಿ ಬೆಳಗುವ ಮೂಲಕ ಸ್ವಾಗತಿಸುವುದು ಸಾಮಾನ್ಯ. ಆದರೆ ಇದೊಂದು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮತಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಗ್ರಾಮಸ್ಥರು (Karnataka Election) ನೆಡೆಮುಡಿ ಹಾಗೂ ಈಡುಗಾಯಿ ಒಡೆಯುವ ಮೂಲಕ ಅದ್ಧೂರಿಯಾಗಿ ವಿಶಿಷ್ಟ ಆಚರಣೆ ಮೂಲಕ ಸ್ವಾಗತಿಸಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಹೊಸದುರ್ಗ ರಸ್ತೆಯ ಬೀರೆನಹಳ್ಳಿ ಸಮೀಪದ ಕರಿಯಣ್ಣನಹಟ್ಟಿ ಗ್ರಾಮಕ್ಕೆ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಗುರುವಾರ ರಾತ್ರಿ ಮತಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ವಿಶೇಷವಾಗಿ ಸ್ವಾಗತ ಮಾಡಿದ್ದಾರೆ. ಪೂರ್ಣಿಮಾ ಅವರ ಕಾಲು ತೊಳೆದು, ಪೂಜೆ ಮಾಡಿ, ನೆಡೆಮುಡಿ ಹಾಗೂ ಈಡುಗಾಯಿ ಒಡೆಯುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಇನ್ನು ಅಭ್ಯರ್ಥಿಯ ಹೆಜ್ಜೆ ಹೆಜ್ಜೆಗೂ ತೆಂಗಿನಕಾಯಿ ಒಡೆದು ಬರಮಾಡಿಕೊಂಡರು. ಇಂತಹ ವಿಶಿಷ್ಟ ಆಚರಣೆ ಕಾಡುಗೊಲ್ಲರ ಹಟ್ಟಿಗಳಲ್ಲಿ ಕಾಣಬಹುದಾಗಿದೆ. ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಗೊಲ್ಲರಹಟ್ಟಿಗಳಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಜನ ಬೆಂಬಲ ಕಂಡ ಅಭ್ಯರ್ಥಿ ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅಭ್ಯರ್ಥಿ ಕೆ. ಪೂರ್ಣಿಮಾ ಶ್ರೀನಿವಾಸ್. ಇನ್ನು ಈ ವಿಶಿಷ್ಟ ಆಚರಣೆಯ ಸ್ವಾಗತ ಕುರಿತು ಮಾತನಾಡಿದ ಪೂರ್ಣಿಮಾ “ನಾನು ಶಾಸಕಳಾಗಿ ಆಯ್ಕೆಯಾದ ಮೇಲೆ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಮ್ಮ ಬಿಜೆಪಿ ಸರ್ಕಾರ ಇಚ್ಛಾಶಕ್ತಿಯಿಂದ, ನಮ್ಮ ಬದ್ಧತೆಯಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸಲಾಯಿತು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election : ಮಧ್ಯರಾತ್ರಿ ಆಟೊ ತಡೆದು 93.50 ಲಕ್ಷ ರೂ. ಸೀಜ್, ಬಸ್‌ನಲ್ಲಿ ಗಾಂಜಾ ಪತ್ತೆ
ಹಾಗೆಯೇ, “ತಾಲೂಕಿನಲ್ಲಿ ಉತ್ತಮ ಆರೋಗ್ಯ ನೀಡುವ ದೃಷ್ಟಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳಿಗೆ ಸಂಚರಿಸಲು ತೊಂದರೆಯಾಗದಂತೆ ಬಸ್ ಡಿಪೋ ನಿರ್ಮಾಣ, ಹುಳಿಯಾರು ರಸ್ತೆ ಅಗಲೀಕರಣ, ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ. ನೀರಾವರಿಗೆ ಸಂಬಂಧಿಸಿದಂತೆ ಅನೇಕ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಗ್ರಾಮಗಳಲ್ಲಿ ಸಿಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಮನೆಗಳ ನಿರ್ಮಾಣ ಈಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಮತದಾರರು ನೀಡಿದ ಅಮೂಲ್ಯವಾದ ಮತಕ್ಕೆ ಮೋಸವಾಗದಂತೆ ನಾನು ನಿಮ್ಮ ಋಣ ತೀರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ” ಎಂದು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.