ಚಳ್ಳಕೆರೆ: “ಸಂವಿಧಾನ, ಸರ್ಕಾರದ ಆಶಯದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬರದ್ದು” ಎಂದು ಪಿಆರ್‌ಪುರ ಹೋಬಳಿ ಚುನಾವಣಾ (Karnataka Election) ಅಧಿಕಾರಿ ಫ್ಲೈಯಿಂಗ್ ಸ್ಕ್ವಾಡ್, ತಾಲೂಕು ಸಾಮಾಜಿಕ ಅರಣ್ಯಾಧಿಕಾರಿ ಎಸ್.ಬಾಬು ಹೇಳಿದರು.
ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದ ಬಸ್ ತಂಗುದಾಣದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅರಿವು ಅಭಿಯಾನದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು.
“ಸಾರ್ವಜನಿಕರು ಜಾತಿ, ಮತ, ಧರ್ಮ, ಹಣ, ಆಭರಣ, ವಸ್ತುಗಳಿಗೆ ಮಾರು ಹೋಗದೆ ನಿರ್ಭೀತಿಯಿಂದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು” ಎಂದು ಅವರು ಹೇಳಿದರು.
ಪಿಆರ್‌ಪುರ ಗ್ರಾಮ ಪಂಚಾಯಿತಿ ಪಿಡಿಒ ಜಿ.ದೇವರಾಜು ಅವರು ಪ್ರಾಸ್ತಾವಿಕ ಮಾತನಾಡಿ, “ಹೋಬಳಿ ಕೇಂದ್ರವೂ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾನರ್, ಬಂಟಿಂಗ್ಸ್ ಸೇರಿ ವಿವಿಧ ರಾಜಕೀಯ ಪಕ್ಷಗಳ ಫ್ಲೆಕ್ಸ್‌ಗಳನ್ನು ಪೌರಕಾರ್ಮಿಕರು ತೆರವುಗೊಳಿಸಿದ್ದಾರೆ. ಸಾರ್ವಜನಿಕರು ಸರ್ಕಾರದ ನಿರ್ದೇಶನದಂತೆ ಮತದಾನಕ್ಕೆ ನೆರೆಹೊರೆಯವರನ್ನು ಪ್ರೇರೇಪಿಸಿಸಬೇಕು. ತಮಗೆ ಇಷ್ಟಬಂದ ವ್ಯಕ್ತಿಗೆ, ಪಕ್ಷಕ್ಕೆ ಮತದಾನ ಮಾಡುವ ಸ್ವತಂತ್ರವಿದೆ. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು” ಎಂದು ಮನವಿ ಮಾಡಿದರು.
ಇದನ್ನೂ ಓದಿ: Road Accident: ಚಳ್ಳಕೆರೆಯಲ್ಲಿ ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಚಕ್ರಕ್ಕೆ ಸಿಲುಕಿ ಯುವಕನ ದೇಹ ಛಿದ್ರ
ಇದೇ ವೇಳೆ ಗ್ರಾಮದ ವರ್ತಕರು, ಆಟೋ ಚಾಲಕರು, ಹಮಾಲರು, ಪ್ರಯಾಣಿಕರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚುನಾವಣಾ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಶುರಾಮಪುರ ಹೋಬಳಿ ವ್ಯಾಪ್ತಿಯ ಚುನಾವಣಾಧಿಕಾರಿ ಎಸ್.ಬಾಬು, ಪಿಡಿಒ ಜಿ.ದೇವರಾಜು, ವಿಶೇಷ ತಂಡದ ಎಎಸ್‌ಐ ಟಿ.ಚಂದ್ರಪ್ಪ, ಎಸ್‌ಡಿಎ ವೆಂಕಟೇಶ, ಕರವಸೂಲಿಗಾರ ಬಜ್ಜಪ್ಪ, ವಿಡಿಯೊಗ್ರಾಫರ್ ನಾಗರಾಜು, ವೆಂಕಟೇಶ, ಜಗಳೂರಪ್ಪ, ಪ್ರಾಧ್ಯಾಪಕ ತಿಪ್ಪೇರುದ್ರಪ್ಪ ಸಂಡೂರು, ಶಿಕ್ಷಕ ಒ.ಚಿತ್ತಯ್ಯ, ಶಿವಮೂರ್ತಿ, ರಾಜು, ತಿಮ್ಮಯ್ಯ, ರಹಮತ್, ರಾಮಾಂಜಿನೇಯ ಸೇರಿ ಅನೇಕರು ಹಾಜರಿದ್ದರು.