ಹಿರಿಯೂರು: ಇಂದು ನಾಮಪತ್ರ ಸಲ್ಲಿಕೆಗೆ (Karnataka Election) ಕೊನೆಯ ದಿನವಾಗಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಅವರು ಸಾವಿರಾರು ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ರವೀಂದ್ರಪ್ಪ ಅವರು ಇಂದು ಅಧಿಕೃತವಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಗರದ ತೇರು ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು. ನಂತರ ರಂಜಿತಾ ಹೋಟೆಲ್‌ನಿಂದ ಬೃಹತ್ ರೋಡ್ ಶೋ ಆರಂಭಿಸಿ, ತಾಲೂಕು ಕಚೇರಿ ತಲುಪಿದರು.
ಇದನ್ನೂ ಓದಿ: Karnataka Election 2023: ಮೊಮ್ಮಗನನ್ನು ಪ್ರಚಾರಕ್ಕೆ ಕರೆ ತಂದ ಸಿದ್ದರಾಮಯ್ಯಗೆ ಪುಕ್ಕಲುತನ ಕಾಡುತ್ತಿದೆ: ಪ್ರತಾಪ್ ಸಿಂಹ
ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರಪ್ಪ, “ಕ್ಷೇತ್ರದಲ್ಲಿ ಇಬ್ಬರು ಬಲಿಷ್ಠ ಅಭ್ಯರ್ಥಿಗಳಿದ್ದಾರೆ. ಆದರೆ ನಮ್ಮ ಜೆಡಿಎಸ್ ಪಕ್ಷದಲ್ಲಿ ಇನ್ನೂ ಬಲಿಷ್ಠವಾದ ನಾಯಕರು ಹಾಗೂ ಕಾರ್ಯಕರ್ತರು ಇದ್ದಾರೆ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅದಕ್ಕೆ ಇವತ್ತು ಬೃಹತ್ ರೋಡ್ ಶೋಗೆ ಹರಿದು ಬಂದ ಜನಸಾಗರವೇ ಸಾಕ್ಷಿಯಾಗಿದೆ” ಎಂದರು.
“ಜೆಡಿಎಸ್ ಸರ್ಕಾರ ಅಭಿವೃದ್ಧಿಯ ಪರವಾಗಿ ಇರುವ ಪಕ್ಷವಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನುಡಿದಂತೆ ನಡೆಯುವ ಏಕೈಕ ಮುಖ್ಯಮಂತ್ರಿ ಅಂದರೆ ಅದು ಕುಮಾರಸ್ವಾಮಿ ಮಾತ್ರ. ಅವರು ಜನತೆಗೆ ಆಶ್ವಾಸನೆ ಕೊಟ್ಟು ಸುಮ್ಮನಾಗುವ ವ್ಯಕ್ತಿಯಲ್ಲ. ಈ ಬಾರಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವ ವಿಶ್ವಾಸ ನನಗಿದೆ. ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನಡೆಸುತ್ತಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election 2023: ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಕಾಂಗ್ರೆಸ್ ಘೋಷಿಸಲಿ: ವಿ. ಸೋಮಣ್ಣ ಸವಾಲು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಜಯಣ್ಣ, ತಾಲೂಕು ಜೆಡಿಎಸ್ ಘಟಕ ಅಧ್ಯಕ್ಷ ಹನುಮಂತರಾಯ, ಶಿವಪ್ರಸಾದ್ ಗೌಡ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಶಿವಶಂಕರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಮಂಜುನಾಥ್, ಶ್ರವಣಗೆರೆ ಹನುಮಂತರಾಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.