Site icon Vistara News

Karnataka Election: ಜೆಡಿಎಸ್‌ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ; ಕುತಂತ್ರದಿಂದ ಉತ್ಸಾಹ ಕುಗ್ಗಿಸಲಾಗದು ಎಂದು ಪಕ್ಷದ ಟಾಂಗ್‌

#image_title

ಹಿರಿಯೂರು: ಹಿರಿಯೂರಿನ ಜೆಡಿಎಸ್‌ ಅಭ್ಯರ್ಥಿ (Karnataka Election) ರವೀಂದ್ರಪ್ಪ ಅವರ ಮನೆಯ ಮೇಲೆ ಶನಿವಾರ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ, ಈ ರೀತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಕುತಂತ್ರ ಮಾಡಿ ನಮ್ಮ ಪಕ್ಷದ ಉತ್ಸಾಹವನ್ನು ತಗ್ಗಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ ಆರೋಪಿಸಿದರು.

ನಗರದ ಅವಧಾನಿ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರ ಮನೆ ಮೇಲೆ ನಡೆದ ಐಟಿ ದಾಳಿಯ ಪ್ರಯುಕ್ತ ಕರೆದಿದ್ದ ತುರ್ತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರ ಕುತಂತ್ರದಿಂದ ನಡೆದ ದಾಳಿಯಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗೆ ಸಿಗುತ್ತಿರುವ ಜನಬೆಂಬಲ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಅವರದೇ ಸರ್ಕಾರಗಳನ್ನು ಇಟ್ಟುಕೊಂಡು ಈ ರೀತಿಯ ದಾಳಿ ನಡೆಸಿದರೆ, ನಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು ಎಂದು ಅವರು ಭಾವಿಸಿದ್ದರೆ ಅದು ಅವರ ಮೂರ್ಖತನವಾಗುತ್ತದೆ. ಇಂತಹ ಕುತಂತ್ರಗಳಿಂದ ನಮ್ಮಲ್ಲಿ ಹೋರಾಟದ ಕಿಚ್ಚು ಹೆಚ್ಚುತ್ತದೆ. ಜಿಲ್ಲೆಯಲ್ಲಿ ಕನಿಷ್ಠ 3ರಿಂದ ನಾಲ್ಕು ಸೀಟನ್ನು ನಮ್ಮ ಪಕ್ಷ ಗೆಲ್ಲಲಿದೆ. 40 ಪರ್ಸೆಂಟ್ ಲಂಚ, ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದ ಬಡವರ ಬದುಕಿನ ಮೇಲೆ ದಾಳಿ ಮಾಡಿದ ಆಡಳಿತ ಪಕ್ಷದ ಅಧಿಕಾರ ದುರುಪಯೋಗ, ದುರಾಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿ ಕುಮಾರಣ್ಣನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ.” ಎಂದು ಅವರು ಹೇಳಿದ್ದಾರೆ.

“ತಾಲೂಕಿನಲ್ಲಿ ಹೊರಗಿನವರು ಹೊರಟು ಹೋಗಿ ಸ್ಥಳೀಯ ಅಭ್ಯರ್ಥಿ ಗೆಲ್ಲುವ ಸೂಚನೆ ಸಿಕ್ಕಿದ್ದು ನೇರವಾಗಿ ಚುನಾವಣೆ ಎದುರಿಸಲಾಗದೆ ಈ ರೀತಿಯ ದಾಳಿ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಮತ್ತು ನಮ್ಮ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ಈ ರೀತಿಯ ದೌರ್ಜನ್ಯಗಳು ನಡೆದರೆ ನಾವು ಹೋರಾಟಕ್ಕಿಳಿಯಬೇಕಾಗುತ್ತದೆ” ಎಂದು ಜಯಣ್ಣ ಅವರು ಎಚ್ಚರಿಸಿದರು.

ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್ ಮಾತನಾಡಿ, “ಆಡಳಿತ ಯಂತ್ರದವರು ರವೀಂದ್ರಪ್ಪನವರು ನೌಕರಿಯಲ್ಲಿದ್ದಾಗ ಯಾಕೆ ದಾಳಿ ಮಾಡಲಿಲ್ಲ? ನಿವೃತ್ತಿಯಾದಾಗ ಯಾಕೆ ದಾಳಿ ಮಾಡಲಿಲ್ಲ? ನಮ್ಮ ಪಕ್ಷದ ಅಭ್ಯರ್ಥಿಯಾದ ತಕ್ಷಣವೇ ಯಾಕೆ ಈ ದಾಳಿ? ಚುನಾವಣೆಯಲ್ಲಿ ಜಯ ಗಳಿಸುತ್ತಾರೆ ಎಂಬ ಭಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿ ಐಟಿ ದಾಳಿ ನಡೆಸಿದ್ದೀರಿ” ಎಂದು ದೂರಿದರು.

“ರಾಷ್ಟ್ರೀಯ ಪಕ್ಷಗಳ ಕುಮ್ಮಕ್ಕಿನಿಂದ ನಾಮಪತ್ರ ಸಲ್ಲಿಸಿ 24 ಗಂಟೆಯೊಳಗೆ ದಾಳಿ ಮಾಡಿಸಿದ್ದು ನಾಚಿಕೆಗೇಡಿನ ಸಂಗತಿ. ನಮ್ಮ ಶಕ್ತಿಯನ್ನು ಜೀರ್ಣಿಸಿಕೊಳ್ಳಲಾಗದೆ ಈ ಕುತಂತ್ರ ನಡೆಸಿದ್ದು ಇದರಿಂದ ಯಾವುದೇ ಕಾರಣಕ್ಕೂ ನಮ್ಮ ಉತ್ಸಾಹ ಅಡಗಿಸಲಾಗುವುದಿಲ್ಲ. ಇದರಲ್ಲಿ ಯಾರ ಕೈವಾಡವಿದೆ ಎಂಬ ಮಾಹಿತಿ ನಮಗಿದೆ. ಹಿರಿಯೂರು, ಆದಿವಾಲ ಮಧ್ಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಂಗತಿ ಯಾರಿಗೂ ಗೊತ್ತಿಲ್ಲದ್ದೇನಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯವರ ಕುಮ್ಮಕ್ಕಿನಿಂದ ಜವಾಬ್ದಾರಿಯುತ ಅಧಿಕಾರಿಗಳು ಅಲ್ಲಿನ ರೆಸಾರ್ಟ್‌ನಲ್ಲಿ ಮೋಜು ಮಸ್ತಿ ಮಾಡುವುದು ಇನ್ನಾದರೂ ನಿಲ್ಲಲಿ. ನಮ್ಮ ಅಭ್ಯರ್ಥಿ ರವೀಂದ್ರಪ್ಪನವರ ಹೆಂಡತಿ, ಮಗನನ್ನು 18 ಗಂಟೆ ದಿಗ್ಬಂಧನದಲ್ಲಿಟ್ಟು ಮಾನಸಿಕವಾಗಿ ಕುಗ್ಗಿಸಿದರೆ ನಾವು ಆಘಾತಗೊಳ್ಳುವುದಿಲ್ಲ. ಈ ದಾಳಿಯಿಂದ ನಮ್ಮ ಬಲ ಇನ್ನೂ ಹೆಚ್ಚಿದೆ. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಶಾಮೀಲಾಗಿವೆ” ಎಂದರು.

ಇದನ್ನೂ ಓದಿ: Karnataka Election: ಹಿರಿಯೂರು ಜೆಡಿಎಸ್‌ ಅಭ್ಯರ್ಥಿ ಎಂ. ರವೀಂದ್ರಪ್ಪ ನಾಮಪತ್ರ ಸಲ್ಲಿಕೆ

ಇದೇ ವೇಳೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಶಿವಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ದ್ಯಾಮೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಪ್ರಸಾದ್ ಗೌಡ, ಗಿರಿಜಪ್ಪ, ಜೆಜೆ ಹಳ್ಳಿ ಮಂಜಣ್ಣ, ಎಂ.ಡಿ. ರವಿ, ಬಿದರಿಕೆರೆ ಚಿದಾನಂದ್, ಎಚ್.ಆರ್. ತಿಮ್ಮಯ್ಯ, ಪರಮೇಶ್, ರಾಧಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version