ಹೊಳಲ್ಕೆರೆ: ʻʻಹೊಳಲ್ಕೆರೆ ಕ್ಷೇತ್ರದಲ್ಲಿ ನಾನಾಗಿ ಕಣಕ್ಕಿಳಿದೆ ಎನ್ನುವುದಕ್ಕಿಂತಲೂ ಸರ್ವಾಧಿಕಾರಿ ಧೋರಣೆಯ ಹಾಲಿ ಶಾಸಕ ಚಂದ್ರಪ್ಪ ಅವರನ್ನು ಸೋಲಿಸಲೇಬೇಕೆಂದು ನನ್ನ ಮೇಲೆ ಒತ್ತಡ ತಂದು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ನಿಲ್ಲಿಸಿದ್ದಾರೆ. ಜನರ ಮನವಿಗೆ ಸ್ಪಂದಿಸಿ ನಾನು ಸ್ಪರ್ಧಿಸಿದ್ದು, ಸುಳ್ಳಿನ ರಾಜ ಚಂದ್ರಪ್ಪನಿಗೆ ಜನ ಪಾಠ ಕಲಿಸಲು ಕಾತರದಿಂದ ಕಾಯುತ್ತಿದ್ದಾರೆ” ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು. ಅವರು ಗುರುವಾರ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ (Karnataka Election) ಸಲ್ಲಿಸಿದ ವೇಳೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದ ಕೊಟ್ರೆನಂಜಪ್ಪ ಪದವಿ ಪೂರ್ವ ಕಾಲೇಜು ಮೈದಾನದ ಬಳಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ತೆರೆದ ವಾಹನದಲ್ಲಿ ಪ್ರಮುಖ ಮುಖಂಡರ ಜೊತೆ ಮೆರವಣಿಗೆ ಮೂಲಕ ಸಾಗಿದ ಆಂಜನೇಯ ಹಾಗೂ ಇತರೆ ನಾಯಕರುಗಳಿಗೆ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆ ಸುರಿಸಿ, ಬೃಹದಾಕಾರದ ಸೇಬಿನ ಹಾರ ಹಾಕಿ ಜಯಘೋಷ ಮೊಳಗಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆಯಲ್ಲಿ ಮಾತನಾಡಿದ ಆಂಜನೇಯ ಅವರು, “ಹೊಳಲ್ಕೆರೆ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಸಾಮಾನ್ಯ ಕುಟುಂಬದ ನಾನು ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವನಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟವರು ಹೊಳಲ್ಕೆರೆ ಕ್ಷೇತ್ರದ ಜನ. ಸಚಿವನಾಗಿದ್ದ ಸಂದರ್ಭದಲ್ಲಿ ಎಲ್ಲ ಸಮುದಾಯದವರಿಗೆ ಸಾವಿರಾರು ಕೊಳವೆಬಾವಿ ಕೊರೆಯಿಸಿದ್ದೆ. ಕೊನೇ ಗಳಿಗೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಬೋರ್‌ವೆಲ್ ಸೌಲಭ್ಯ ಮಂಜೂರು ಮಾಡಿದ್ದೆ. ಆದರೆ, ಚುನಾವಣೆ ಘೋಷಣೆ ಆದ ಕಾರಣಕ್ಕೆ ಕೊರೆಯಿಸಲು ಸಾಧ್ಯವಾಗಿರಲಿಲ್ಲ. ಆದರೆ, ಬಳಿಕ ಗೆದ್ದ ಎಂ.ಚಂದ್ರಪ್ಪ, ರೈತರಿಗೆ ನನ್ನ ಅವಧಿಯಲ್ಲಿ ಕೊಟ್ಟಿದ್ದ ಕೊಳವೆಬಾವಿ ಸೌಲಭ್ಯ ಕಸಿದುಕೊಂಡರು. ರೈತಸಂಘದವರು ಪ್ರತಿಭಟನೆ ನಡೆಸಿದರೆ ಸರ್ವಾಧಿಕಾರಿ ರೀತಿ ವರ್ತಿಸಿ, ಅನ್ನದಾತರಿಗೆ ಅನ್ಯಾಯ ಮಾಡಿದರು” ಎಂದು ದೂರಿದರು.
“ಕ್ಷೇತ್ರದಲ್ಲಿ ಎಷ್ಟು ಕೆರೆಗಳು ಇವೆ ಎಂಬ ಲೆಕ್ಕವೇ ಗೊತ್ತಿಲ್ಲದ ಶಾಸಕರು, 300 ಕೆರೆ ಅಭಿವೃದ್ಧಿಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬೇಕಿದ್ದರೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದರು. ಈಗ ಜನರಿಗೆ ನನ್ನ ಸುಳ್ಳು ಗೊತ್ತಾಗಿದೆ ಎಂದು ಬೇರೆ ಸುಳ್ಳು ಹೇಳಲು ಆರಂಭಿಸಿದ್ದಾರೆ” ಎಂದು ಟೀಕಿಸಿದರು.
“ಹೊಳಲ್ಕೆರೆ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಶಾಲೆ, ಕಾಲೇಜು, ತರಬೇತಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ಪ್ರತಿ ಹಳ್ಳಿಗಳ ರಸ್ತೆ ಅಭಿವೃದ್ಧಿಗೊಳಿಸಿದ್ದೇನೆ. ಹತ್ತಾರು ಸಮುದಾಯಗಳ ನಿರ್ಮಾಣ ಮಾಡಲಾಗಿದೆ. ನನ್ನ ಅವಧಿಯ ಕೆಲಸಗಳನ್ನು ಉದ್ಘಾಟಿಸಿದ ಚಂದ್ರಪ್ಪ, ಇವುಗಳು ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಜನರನ್ನು ದಡ್ಡರು ಎಂದು ಭಾವಿಸಿದಂತೆ ಇದೆ. ಆದರೆ ಜನರು ಪ್ರಜ್ಞಾವಂತರು, ಪ್ರಬುದ್ಧರು ಇದ್ದು, ತಕ್ಕ ಪಾಠ ಕಲಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election: ಹೊಳಲ್ಕೆರೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜಯಸಿಂಹ ನಾಮಪತ್ರ ಸಲ್ಲಿಕೆ
“ಆಂಧ್ರ ಸೇರಿ ವಿವಿಧೆಡೆಯಿಂದ ಗುತ್ತಿಗೆದಾರರನ್ನು ಕರೆಯಿಸಿ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಅವ್ಯವಹಾರ ಆಗಿದೆ. ಬಿಜೆಪಿ ಕಾರ್ಯಕರ್ತರ ಮೂಗಿಗೆ ತುಪ್ಪ ಸವರಿ, ಅವರ ಹೆಸರಿಗೆ ಕಳಂಕ ತಂದಿದ್ದಾರೆ. ಈ ಮಾತನ್ನು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈಗಾಗಲೇ ಬಹುತೇಕ ಹಳ್ಳಿಗಳಲ್ಲಿ ಶಾಸಕ ಚಂದ್ರಪ್ಪ ಅವರಿಗೆ ಪ್ರವೇಶ ನೀಡದೆ, ಬಹಿಷ್ಕಾರ ಹಾಕುತ್ತಿದ್ದಾರೆ. ಕೇವಲ ಸುಳ್ಳಿನ ಐದು ವರ್ಷ ಕಳೆದ ನೀವು ಬೇಡ ಎಂದು ಹೇಳುತ್ತಿದ್ದಾರೆ” ಎಂದರು.
“ಕ್ಷೇತ್ರದ ಜನ ನನ್ನ ಹಾಗೂ ನನ್ನ ಕೆಲಸ ಕುರಿತು ಬಹಳಷ್ಟು ನಂಬಿಕೆ, ಅಭಿಮಾನ ಇಟ್ಟಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರಋಣಿ. ಐದು ವರ್ಷದಲ್ಲಿ ಅವರು ಪಟ್ಟ ಕಷ್ಟ ಹೇಳತೀರದು. ಒಂದು ಮನೆ, ಒಂದು ಕೊಳವೆಬಾವಿ ಸೌಲಭ್ಯ ಬಡಜನರಿಗೆ ತಲುಪಿಲ್ಲ. ನನ್ನ ಮೊದಲ ಆದ್ಯತೆ ಸೂರಿಲ್ಲದವರಿಗೆ ಮನೆ ಕೊಡುವುದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಿದೆ” ಎಂದರು.
“ಜಿ.ಎಸ್‌ಮಂಜುನಾಥ್, ಓ.ಶಂಕರ್, ಸವಿತಾ ಸೇರಿ ಅನೇಕರು ಕ್ಷೇತ್ರದಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಆಗಿದ್ದರು. ಯಾರಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಅವರ ಗೆಲುವಿಗೆ ಶ್ರಮಿಸಲು ಸಿದ್ಧನಿದ್ದೆ. ಆದರೆ, ಪಕ್ಷ, ಕೊನೇ ಗಳಿಗೆಯಲ್ಲಿ ನಡೆಸಿದ ಸಮೀಕ್ಷೆ ಆಧಾರದಡಿ ನನಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂದರ್ಭ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ನನ್ನ ಗೆಲುವಿಗೆ ಕೈಜೋಡಿಸಿ, ಮೆರಣಿಗೆಯಲ್ಲಿ ಪಾಲ್ಗೊಂಡಿರುವುದು ಪಕ್ಷದ ಬಲವರ್ಧಗೆ ಸಹಕಾರಿ ಆಗಿದೆ” ಎಂದು ಆಂಜನೇಯ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜಪೀರ್, ಕೆ.ಪಿ.ಸಿ.ಸಿ ಕೋಆರ್ಡಿನೇಟರ್ ಡಾ.ರಾಘವೇಂದ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಜೆ.ಜೆ.ಹಟ್ಟಿ, ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ಶಿವಮೂರ್ತಿ, ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ಶಿವಮೂರ್ತಿ ಲೋಹಿತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹೊಳಲ್ಕೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿಗಳಾದ ಡಿ.ಎನ್ ಮೈಲಾರಪ್ಪ ಕೆ.ಪಿ.ಸಂಪತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.