ಹಿರಿಯೂರು : “ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ (Karnataka Election) ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮತ ನೀಡಬೇಕು. ಮಹಿಳೆಯರು ಅವರ ಪರವಾಗಿ ಓಬವ್ವನಂತೆ ಜೊತೆ ನಿಲ್ಲಬೇಕು” ಎಂದು ಬಿಜೆಪಿ ಯುವ ನಾಯಕ ಕೆ ಅಭಿನಂದನ್ ಹೇಳಿದರು.
ತಾಲೂಕಿನ ರಂಗೇನಹಳ್ಳಿ, ಬಿದರಿಕೆರೆ, ಹೊಸಳ್ಳಿ ಹಾಗೂ ಉಪ್ಪಾರಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಪ್ರಚಾರ ನೆಡೆಸಿ, ಅಲ್ಲಿನ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: Karnataka Election : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮುಗಲಭೆ; ಶಾ ಬೆಂಬಲಕ್ಕೆ ನಿಂತ ಸಿ.ಟಿ. ರವಿ, ಕರಂದ್ಲಾಜೆ
“ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದರು. ಇಷ್ಟು ವರ್ಷಗಳ ಕಾಲ ಕ್ಷೇತ್ರವನ್ನು ಆಳಿದ ದಿಗ್ಗಜರ ಕೈಯಲ್ಲಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ಪೂರ್ಣಿಮಾ ಶ್ರೀನಿವಾಸ್ ಅವರು ಮಾಡಿ ತೋರಿಸಿದ್ದಾರೆ. ನಮ್ಮ ಧರ್ಮಪುರ ಕೆರೆಗೆ ನೀರು ತುಂಬಿಸುವ ಯೋಜನೆಗೆ ನೂರಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದೆವು. ಆದರೆ, ಯಾರಿಂದಲೂ ಈ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಪೂರ್ಣಿಮಾ ಅವರು ಧರ್ಮಪುರ ಕೆರೆ ಮತ್ತು ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕೈ ಹಾಕಿ ಈ ಭಾಗದ ಜನರ ಬಹು ದಿನಗಳ ಕನಸು ನನಸು ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಜೊತೆಗೆ ಡಿಪೋ, ನೂತನ ಆಸ್ಪತ್ರೆ ನಿರ್ಮಾಣ, ಭದ್ರಾದಿಂದ ವಿವಿ ಸಾಗರಕ್ಕೆ ನೀರು ತುಂಬಿಸುವ ಯೋಜನೆಗಳನ್ನು ಮಾಡಿದ್ದಾರೆ. ಪುರುಷರ ಕೈಯಲ್ಲಿ ಆಗದ ಕೆಲಸವನ್ನು ಮಹಿಳೆಯೊಬ್ಬರು ಮಾಡಿ ತೋರಿಸಿದ್ದಾರೆ. ಹಾಗಾಗಿ ನೀವೆಲ್ಲರೂ ಮತ್ತೊಮ್ಮೆ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಿ ಆಶೀರ್ವಾದ ಮಾಡಬೇಕು” ಎಂದು ಹೇಳಿದರು.
ಇದೇ ವೇಳೆ ಗ್ರಾಮಸ್ಥರು ಕೆ.ಅಭಿನಂದನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.