Site icon Vistara News

Road Accident: ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಲಾರಿಗೆ ಡಿಕ್ಕಿ, ಮೂವರ ಸಾವು

ambulance hit lorry three death

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿಯಾಗಿ (road accident) ಆಂಬ್ಯುಲೆನ್ಸ್‌ನಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ.

ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ದುರ್ಘಟನೆ ನಡೆದಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್‌ ಡಿಕ್ಕಿಯಾಗಿದೆ. ಅಹಮದಾಬಾದ್‌ನಿಂದ ತಮಿಳುನಾಡಿಗೆ ಶವ ಸಾಗಿಸುವ ಮಾರ್ಗ ಮಧ್ಯೆ, ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆ ಆಂಬ್ಯುಲೆನ್ಸ್ ತೆರಳುತ್ತಿತ್ತು.

ಆಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ಇಬ್ಬರ ಗುರುತು ಪತ್ತೆಯಾಗಿದೆ. ಇವರನ್ನು ಕನಕಮಣಿ (72), ಆಕಾಶ್ (17) ಎಂದು ಗುರುತಿಸಲಾಗಿದ್ದು, ಮೃತ ಚಾಲಕನ ಹೆಸರು ಪತ್ತೆಯಾಗಿಲ್ಲ. ಘಟನೆಯಲ್ಲಿ ಜ್ಞಾನಶೇಖರ್, ಮೌಳಿ ರಾಜನ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ದ್ವಿಚಕ್ರ ವಾಹನಗಳ ಡಿಕ್ಕಿ, ಒಬ್ಬ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿಯಾಗಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನ್ಲೆ ಕ್ರಾಸ್‌ ಬಳಿ ಅಪಘಾತ ನಡೆದಿದೆ.

ಶಿರಸಿ ಕಸ್ತೂರಬಾ ನಗರ ನಿವಾಸಿ ಮಣಿ ಮೃತಪಟ್ಟ ಯುವಕ. ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೊಬ್ಬ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

Exit mobile version