ಚಿತ್ರದುರ್ಗ: ಅಂತರ್ಜಾತಿ ವಿವಾಹ (Inter caste marriage) ಆಗಿದ್ದಕ್ಕೆ ದಂಡ ವಿಧಿಸಿ, ಪುಟ್ಟ ಮಗು ಸಹಿತ ದಂಪತಿಯನ್ನು ಊರಿನಿಂದ ಬಹಿಷ್ಕಾರ ಹಾಕಿದ (ostracizing) ಅಮಾನವೀಯ ಘಟನೆ ಚಿತ್ರದುರ್ಗ (Chitradurga news) ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್. ದೇವರಹಳ್ಳಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಸಾವಿತ್ರಮ್ಮ, ಮಣಿಕಂಠ ಎಂಬ ಯುವ ದಂಪತಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಈ ಇಬ್ಬರೂ ಹುಟ್ಟಿನಿಂದಲೇ ಶ್ರವಣ, ವಾಕ್ ದೋಷ ಹೊಂದಿದ್ದಾರೆ. ಇಬ್ಬರೂ ಬೇರೆ ಜಾತಿಯವರಾಗಿದ್ದಾರೆ. ಸಾವಿತ್ರಮ್ಮ ಜೋಗಿ ಜನಾಂಗಕ್ಕೆ ಸೇರಿದ್ದು, ಮಣಿಕಂಠ ರೆಡ್ಡಿ ಜನಾಂಗಕ್ಕೆ ಸೇರಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇವರು ಕೆಲಸ ಮಾಡುತ್ತಿದ್ದ ವೇಳೆ ಪ್ರೀತಿಸಿ ಮದುವೆ ಆಗಿದ್ದರು. 2021ರ ಏಪ್ರಿಲ್ 7ರಂದು ವಿವಾಹವಾಗಿದ್ದರು. ಇದೀಗ ದಂಪತಿಗೆ ಒಂದು ತಿಂಗಳ ಮಗುವೂ ಇದೆ. ಸಾವಿತ್ರಮ್ಮ ಹೆರಿಗೆಗಾಗಿ ಇತ್ತೀಚೆಗೆ ತವರಿಗೆ ಬಂದಿದ್ದು, ಗಂಡನನ್ನೂ ಕರೆದುಕೊಂಡು ಬಂದಿದ್ದಳು.
ತವರಿಗೆ ಹೆರಿಗೆಗೆ ಬಂದವಳು ಎಂಬ ಕನಿಕರವೂ ಇಲ್ಲದೆ ಅಮಾನವೀಯವಾಗಿ ವರ್ತಿಸಿದ್ದ ಗ್ರಾಮಸ್ಥರು ಗಲಾಟೆ ತೆಗೆದು ದಂಪತಿಗಳಿಗೆ ಅಂತರ್ಜಾತಿ ವಿವಾಹ ಆಗಿದ್ದಕ್ಕೆ 30 ಸಾವಿರ ದಂಡ ವಿಧಿಸಿದ್ದರು. ದಂಡ ಕಟ್ಟಿಸಿಕೊಂಡು ಊರಿನಿಂದ ಬಹಿಷ್ಕಾರ ಹಾಕಿದ್ದರು. ಸಾವಿತ್ರಮ್ಮನ ಕುಟುಂಬಕ್ಕೂ ಅಳಿಯ- ಮಗಳನ್ನು ಮನೆಯಿಂದ ಹೊರ ಹಾಕುವಂತೆ, ಇಲ್ಲದಿದ್ದರೆ ಇಡೀ ಕುಟುಂಬವನ್ನು ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದರು.
ಗ್ರಾಮಸ್ಥರ ಕಾಟದಿಂದ ಬೇಸತ್ತು ದಂಪತಿ 1 ತಿಂಗಳ ಮಗುವಿನೊಂದಿಗೆ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದಾರೆ. ತಾಯಿ ಮಗುವಿಗೆ ಚಿತ್ರದುರ್ಗದ ಸ್ವಧಾರ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದರೂ ಪೊಲೀಸರು ಭೇಟಿ ನೀಡಿಲ್ಲ ಹಾಗೂ ಬಹಿಷ್ಕಾರ ಹಾಕಿದ ಗ್ರಾಮಸ್ಥರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.