Site icon Vistara News

ಶೂ ಹಾಕಿಕೊಂಡು ಭಂಡಾರ ತುಳಿದ ಕೊರಿಯೋಗ್ರಾಫರ್‌: ನರ್ತಕಿ ಮೈಮೇಲೆ ಬಂದಳೇ ಹುಲಿಗೆಮ್ಮ ದೇವಿ?

ಹುಲಿಗೆಮ್ಮದೇವಿ

ಕೊಪ್ಪಳ: ಉತ್ತರ ಕರ್ನಾಟದ ಪ್ರಮುಖ ಶಕ್ತಿ ದೇವತೆ ಹುಲಿಗೆಮ್ಮ ಕುರಿತ ʻವಿಶ್ವರೂಪಿಣಿ ಹುಲಿಗೆಮ್ಮʼ ಸಿನಿಮಾದ ಚಿತ್ರೀಕರಣ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಮುಂದೆ ನಡೆದಿದೆ. ಈ ನಡುವೆ, ಸಿನಿಮಾ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಹುಲಗೆಮ್ಮ ದೇವಿ ನೃತ್ಯಗಾರ್ತಿ ಪೂಜಾ ಮೈಮೇಲೆ ಬಂದು ಅಬ್ಬರಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಕೊರಿಯೋಗ್ರಾಫರ್‌ ಭಂಡಾರ ತುಳಿದುದೇ ಇದಕ್ಕೆ ಕಾರಣ ಎನ್ನಲಾಗಿದೆ.

ತಾಲೂಕಿನ ಐತಿಹಾಸಿಕ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ (ಆ.13) ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಕೊರಿಯೋಗ್ರಾಫರ್‌ ಮದನ್‌ ಶೂ ಹಾಕಿಕೊಂಡು ಭಂಡಾರ ತುಳಿದರೆನ್ನಲಾಗಿದೆ. ಆಗ ಸಹ ನರ್ತಕಿ ಪೂಜಾ ಒಮ್ಮಿಂದೊಮ್ಮೆಗೇ ಕೂಗಾಡುತ್ತಾ, ಆಕ್ರೋಶಭರಿತರಾಗಿ ಶೂ ತೆಗೀರಿ, ಭಂಡಾರ ತುಳಿಯಬೇಡಿ ಎಂದು ಅಬ್ಬರಿಸಿದ್ದಾರೆ. ತುಂಬ ಅಸಹಜ ರೀತಿಯಲ್ಲಿ ಆಕೆ ಆಕ್ರೋಶಗೊಂಡಿದ್ದನ್ನು ನೋಡಿದ ಅಲ್ಲಿದ್ದವರು ಹುಲಿಗೆಮ್ಮ ದೇವಿಯೇ ಆಕೆಯ ಮೈಮೇಲೆ ಬಂದು ಎಚ್ಚರಿಕೆ ನೀಡಿದ್ದಾಳೆ ಎಂದು ಹೇಳಿದರು.

ಆಗ ಸೆಟ್‌ನಲ್ಲಿ ಒಮ್ಮಿಂದೊಮ್ಮೆಗೇ ಆತಂಕದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಸ್ಥಳದಲ್ಲಿದ್ದ ನಿರ್ಮಾಪಕಿ ಪೂಜಾ ಕ್ಷಮೆ ಯಾಚಿಸಿದರು. ಪೂಜಾ ಅವರಿಗೆ ಸ್ನಾನ ಮಾಡಿಸಿ ಹಸಿರು ಬಳೆ ಕೊಡಿಸಲಾಯಿತು. ನಂತರ ಸಿನಿಮಾ ತಂಡ ನದಿಯಲ್ಲಿ ಸ್ನಾನ ಮಾಡಿ‌ ಜೋಡಗಾಯಿ‌ ಒಡೆದು ಹುಲಿಗೆಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದೆ.

ಇದನ್ನೂ ಓದಿ | Oscar | ವಿರೋಧದ ಮಧ್ಯೆಯೂ ಲಾಲ್ ಸಿಂಗ್‌ ಚಡ್ಡಾ ಸಿನಿಮಾಗೆ ಆಸ್ಕರ್‌ ಮೆಚ್ಚುಗೆ

ಪ್ರಿಯಾಂಕಾ ಉಪೇಂದ್ರ ಅಭಿನಯದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಆಗಸ್ಟ್‌ 9 ರಂದು ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಚಿತ್ರ ಸೆಟ್ಟೇರಿತ್ತು. ಪ್ರಿಯಾಂಕ ಉಪೇಂದ್ರ ಅವರು ಸಿನಿಮಾದಲ್ಲಿ ಹುಲಿಗೆಮ್ಮ ದೇವಿ ಪಾತ್ರ ಮಾಡುತ್ತಿದ್ದಾರೆ. ಬಹುದೊಡ್ಡ ತಾರಾಬಳಗ ಹೊಂದಿರುವ ಸಿನಿಮಾವು ಹುಲಿಗಿಯಲ್ಲಿ 15 ದಿನ ಚಿತ್ರೀಕರಣವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. 

ಇದನ್ನೂ ಓದಿ | Tootu Madike | ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ‘ತೂತು ಮಡಿಕೆ’ ಅನಾವರಣಕ್ಕೆ ಕ್ಷಣಗಣನೆ!

Exit mobile version