Site icon Vistara News

Civil Airport: ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ವಿಶೇಷ ಪ್ಯಾಕೇಜ್: ಅಸೆಂಬ್ಲಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಆಗ್ರಹ

MLA Rupali S Naik

#image_title

ಕಾರವಾರ: “ಅಂಕೋಲಾದಲ್ಲಿ ನೌಕಾ ನೆಲೆಯ ಮೂಲಕ ನಿರ್ಮಿಸಲಾಗುವ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು” ಎಂದು ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ವಿಧಾನ ಸಭೆಯಲ್ಲಿ (Assembly) ವಿನಂತಿಸಿದ್ದಾರೆ.

ವಿಮಾನ ನಿಲ್ದಾಣ ನಿರಾಶ್ರಿತರಿಗೆ ಪರಿಹಾರದ ಕುರಿತು ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಕಂದಾಯ ಸಚಿವರು ಉತ್ತರ ನೀಡಿದ ತರುವಾಯ, ವಿಮಾನ ನಿಲ್ದಾಣ ನಿರಾಶ್ರಿತರ ಬಗ್ಗೆ ಮಾತನಾಡಿ, “ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸೇರಿ ಸಭೆ ನಡೆಸಿ ವಿಮಾನ ನಿಲ್ದಾಣ ನಿರಾಶ್ರಿತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು” ಎಂದು ಒತ್ತಾಯಿಸಿದರು.

“ನೌಕಾನೆಲೆ ವಿಮಾನ ನಿಲ್ದಾಣ ಸೀಬರ್ಡ್ ಯೋಜನೆಯ ಒಂದು ಭಾಗವಾಗಿದೆ. ಹೀಗಾಗಿ ಸೀಬರ್ಡ್ ನಿರಾಶ್ರಿತರಿಗೆ ನೀಡಿದಂತೆ ಎಲ್ಲ ಸೌಲಭ್ಯಗಳನ್ನು ಈ ನಿರಾಶ್ರಿತರಿಗೂ ನೀಡಬೇಕು. (ಪ್ರತಿ ಕುಟುಂಬಕ್ಕೆ ನಿವೇಶನ, ಪುರುಷರಿಗೆ 70 ಸಾವಿರ ರೂ. ಹಾಗೂ ಅವಿವಾಹಿತ 18 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ಮತ್ತು ಇತರೆ ಎಲ್ಲ ಸೌಲಭ್ಯಗಳ ನೀಡಬೇಕು)” ಎಂದು ವಿನಂತಿಸಿದರು.

ಇದನ್ನೂ ಓದಿ: Actress Kangana Ranaut : ಕಾಂತಾರಾ ಫಿಲ್ಮ್ ದಿ ಬೆಸ್ಟ್ ಸಿನಿಮಾ, ರಿಷಭ್ ಅವರೇ ದಿ ಬೆಸ್ಟ್ ಆ್ಯಕ್ಟರ್ ಎಂದ ಕಂಗನಾ!

“ವಿಮಾನ ನಿಲ್ದಾಣಕ್ಕೆ ಅಧಿಸೂಚನೆ ಹೊರಡಿಸಿ ಹತ್ತು ತಿಂಗಳು ಮುಗಿದಿದ್ದರೂ ಇದುವರೆಗೂ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ನಿರಾಶ್ರಿತರ ಬೇಡಿಕೆಯಂತೆ ಸಮರ್ಪಕ ಪರಿಹಾರ ನೀಡದಿರುವುದಿಂದ ಮತ್ತು ಲೋಪದೋಷ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ” ಎಂದು ಗಮನಕ್ಕೆ ತಂದರು.

“ಆರಂಭದಲ್ಲಿ 87 ಎಕರೆ 14 ಗುಂಟೆ ಜಾಗವನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿತ್ತು. ನಂತರದಲ್ಲಿ ಇನ್ನೂ ಹೆಚ್ಚು ಜಾಗ ಬೇಕು ಎಂದು 6 ಎಕರೆ 8 ಗುಂಟೆ ಜಾಗವನ್ನು ಮತ್ತೆ ಭೂಸ್ವಾಧೀನಕ್ಕೆ ಗುರುತಿಸಿ ಒಟ್ಟು 93 ಎಕರೆ 29 ಗುಂಟೆ ಜಾಗವನ್ನು ಈಗಾಗಲೇ ಭೂಸ್ವಾಧೀನ ಮಾಡಲು ಯೋಜಿಸಲಾಗಿದೆ. ವಿಮಾನ ನಿಲ್ದಾಣದಿಂದ ಚತುಷ್ಪಥ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಸುಮಾರು 10 ಎಕರೆ ಜಾಗ ಬೇಕಾಗಲಿದ್ದು, ಅದನ್ನು ಇನ್ನೂ ಗುರುತಿಸಿಲ್ಲ. ಹೊಸ ಭೂಸ್ವಾಧೀನ ಕಾಯ್ದೆ 2013ರ ಪ್ರಕಾರ 100 ಎಕರೆಗಿಂತಲೂ ಹೆಚ್ಚು ಭೂಸ್ವಾಧೀನ ಮಾಡಿದರೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಮಾಡಿಸಬೇಕಾಗುತ್ತದೆ. ಈ ಅಧ್ಯಯನದಲ್ಲಿ ಜನರ ಸ್ಥಿತಿಗತಿ ಜನರ ಭವಿಷ್ಯದ ಕುರಿತು ಅಧ್ಯಯನ ನಡೆಸಿ ಆ ವರದಿಯ ಆಧಾರದ ಮೇಲೆ ಪರಿಹಾರವನ್ನು ನಿರ್ಧರಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಅಧಿಕಾರಿಗಳು 100 ಎಕರೆಗಿಂತ ಕಡಿಮೆ ತೋರಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದರು.

ಇದನ್ನೂ ಓದಿ: Karnataka Election 2023: ಸಚಿವ ಅಶ್ವತ್ಥನಾರಾಯಣ ವರ್ಸಸ್‌ ಶಾಸಕಿ ಅನಿತಾ ಕುಮಾರಸ್ವಾಮಿ; ಏನಿದು ಅಭಿವೃದ್ಧಿ ಜಟಾಪಟಿ?

“ಹೊಸ ಭೂಸ್ವಾಧೀನ ಕಾಯ್ದೆ ಸೆಕ್ಷನ್ 39ರ ಪ್ರಕಾರ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ವಿವಿಧ ಯೋಜನೆಗಳಲ್ಲಿ ನಿರಾಶ್ರಿತರಾಗಿದ್ದರೆ ಅವರಿಗೆ ಹೆಚ್ಚುವರಿ ಪರಿಹಾರ ಕಲ್ಪಿಸಬೇಕು ಎಂದು ಕಾಯ್ದೆ ತಿಳಿಸುತ್ತದೆ. ಆದರೆ ನನ್ನ ಕ್ಷೇತ್ರದಲ್ಲಿ ಕೊಂಕಣ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಾಗಿ ನಿರಾಶ್ರಿತರಾದವರಿಗೆ ಪುನರ್ವಸತಿ ನೀಡಿಲ್ಲ. ಕೇವಲ ಸೀಬರ್ಡ್ ಯೋಜನೆಗೆ ಮಾತ್ರ ಪುನರ್ವಸತಿ ಕಲ್ಪಿಸಿದ್ದಾರೆ. ಸೆಕ್ಷನ್ 39ರಲ್ಲಿ ಪುನರ್ವಸತಿ ಕೇಂದ್ರ ಎಂದು ಉಲ್ಲೇಖಿಸಿರುವುದರಿಂದ ನನ್ನ ಕ್ಷೇತ್ರದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ನಿರಾಶ್ರಿತರಾದವರಿಗೆ ಸಮಸ್ಯೆಯಾಗುತ್ತಿದೆ. ಪುನರ್ವಸತಿ ಕೇಂದ್ರ ಎನ್ನುವ ಬದಲು ನಿರಾಶ್ರಿತರು ಎಂದಾದಲ್ಲಿ ನಮ್ಮ ಕ್ಷೇತ್ರದವರಿಗೆ ಸಹಾಯವಾಗುತ್ತದೆ” ಎಂದು ವಿವರಿಸಿದರು.

“ಭೂಸ್ವಾಧೀನಗೊಳ್ಳಲಿರುವ ಮೂರು ಗ್ರಾಮದ ಭೂಮಿ ದರದಲ್ಲಿ ಅತಿ ಹೆಚ್ಚು ಇರುವ ಗ್ರಾಮದ ಭೂಮಿ ದರವನ್ನು ಆ ಯೋಜನೆಯ ಭೂಮಿ ಕಳೆದುಕೊಂಡವರಿಗೆ ನೀಡಬೇಕು” ಎಂದು ಒತ್ತಾಯಿಸಿದರು.

“ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿದ 12 ತಿಂಗಳಲ್ಲಿ ಪ್ರಕ್ರಿಯೆ ಆರಂಭವಾಗದಿದ್ದಲ್ಲಿ ಮತ್ತೆ 12 ತಿಂಗಳು ವಿಸ್ತರಣೆಗೆ ಅವಕಾಶ ಇರಲಿದೆ” ಎಂದು ಕಂದಾಯ ಸಚಿವ ಆರ್.ಅಶೋಕ ಸದನದ ಗಮನಕ್ಕೆ ತಂದರು.

ಇದನ್ನೂ ಓದಿ: Jagdeep Dhankhar: ಕರ್ನಾಟಕದ ಎಲ್ ಹನುಮಂತಯ್ಯ ಸೇರಿ 12 ಸಂಸದರ ವಿರುದ್ಧ ವಿಚಾರಣೆ: ರಾಜ್ಯಸಭಾ ಚೇರ್ಮನ್ ಸೂಚನೆ

ಸೆಕ್ಷನ್ 39ರಲ್ಲಿನ ಉಲ್ಲೇಖ ಹಾಗೂ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಬಗ್ಗೆ ಮಾಹಿತಿ ನೀಡದ ಬಗ್ಗೆ ರೂಪಾಲಿ ನಾಯ್ಕ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, “ಇದರಿಂದ ಉಂಟಾಗಿರುವ ಸಮಸ್ಯೆ ಕುರಿತು ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸುವುದಾಗಿ” ತಿಳಿಸಿದರು.

“ಹಿಂದೆ ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಗೆ ಪರಿಹಾರ ಮೂರು ದಶಕಗಳ ಕಾಲ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನೆನಗುದಿಗೆ ಬಿದ್ದಿತ್ತು. ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಸಂಸದರಾದ ಅನಂತಕುಮಾರ್ ಹೆಗಡೆ ಅವರ ಮಾರ್ಗದರ್ಶನ, ನೇತೃತ್ವದಲ್ಲಿ ಗಮನಕ್ಕೆ ತಂದಾಗ ಸಚಿವರಾದ ನಿರ್ಮಲಾ ಸೀತಾರಾಮನ್ ಕಾರವಾರಕ್ಕೆ ಬಂದು ನೌಕಾನೆಲೆ ನಿರಾಶ್ರಿತರಿಗೆ ಪರಿಹಾರ ವಿತರಿಸಿದ್ದರು. ನಿರಾಶ್ರಿತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಬಿಜೆಪಿ ಸರ್ಕಾರ. ಈಗಲೂ ಬಿಜೆಪಿ ಸರ್ಕಾರದ ಮೇಲೆ ನಿರಾಶ್ರಿತರು ಭರವಸೆ ನಿರೀಕ್ಷೆ ಇಟ್ಟಿದ್ದಾರೆ” ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ವಿಧಾನ ಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: BJP Karnataka: 24ಕ್ಕೆ ಪ್ರಗತಿ ರಥ ಚಾಲನೆ, 27ಕ್ಕೆ ಬೆಳಗಾವಿಗೆ ನರೇಂದ್ರ ಮೋದಿ ಭೇಟಿ: ಬಿಜೆಪಿಯಿಂದ ಭರ್ಜರಿ ಕಾರ್ಯಕ್ರಮಗಳು

Exit mobile version