ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಡಿನೊಟಿಫಿಕೇಶನ್ ಪ್ರಕರಣದ ವಿಚಾರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯುಯು ಲಲಿತ್ ಶುಕ್ರವಾರ ತಿಳಿಸಿದರು. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಭೂಮಿಯನ್ನು ಅಕ್ರಮ ಡಿನೊಟಿಫಿಕೇಶನ್ ಮಾಡಲಾಗಿದೆ ಎಂದು ಆಲಂ ಪಾಷಾ ಎನ್ನುವವರು ಕೋರ್ಟ್ ಮೆಟ್ಟಿಲೇರಿದ್ದರು. ಹಾಗೇ, ಈ ತನಿಖೆಯ ಮರು ಆದೇಶಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ನ ಆದೇಶ ರದ್ದುಗೊಳಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ನೀಡಿರುವ ಮರು ತನಿಖೆ ಆದೇಶದ ರದ್ದು ಮಾಡಿ ಎಂದು ಬಿ.ಎಸ್.ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಸಲ್ಲಿಸಿದ್ದ ಅರ್ಜಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾ.ಹೇಮಂತ್ ಗುಪ್ತಾ ಅವರಿದ್ದ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಯು.ಯು. ಲಲಿತ್ ತಾವು ಅರ್ಜಿ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ‘ಪ್ರಸ್ತುತ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ನನಗೆ ಕಷ್ಟವಾಗುತ್ತದೆ. ಹಾಗಾಗಿ ಈ ವಿಷಯವನ್ನು (ಅರ್ಜಿಯನ್ನು) ನಾನು ಇಲ್ಲದ ಪೀಠಕ್ಕೆ ವರ್ಗಾಯಿಸುವುದು ಒಳ್ಳೆಯದು. ನ್ಯಾ.ಹೇಮಂತ್ ಗುಪ್ತಾ ಅವರೊಂದಿಗೆ ಬೇರೆಯವರು ಸೇರಿ ದೀಪಾವಳಿ ನಂತರ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬಹುದು’ ಎಂದಿದ್ದಾರೆ. ಸಿಜೆಐ ಯು.ಯು.ಲಲಿತ್ ನವೆಂಬರ್ನಲ್ಲಿ ನಿವೃತ್ತರಾಗುವ ಹಿನ್ನೆಲೆಯಲ್ಲಿ ಅವರು ಈ ಡಿನೊಟಿಫೈಗೆ ಸಂಬಂಧಪಟ್ಟ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
2011ರಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಭೂಮಿಯನ್ನು ಯಡಿಯೂರಪ್ಪ ಮತ್ತು ಮುರಗೇಶ್ ನಿರಾಣಿ ಡಿನೊಟಿಫೈ ಮಾಡಿದ್ದಾರೆ ಎಂದು ಆಲಂ ಪಾಷಾ ಹೈಕೋರ್ಟ್ಗೆ ದೂರು ನೀಡಿದ್ದರು. ಆದರೆ ಆರೋಪವನ್ನು ದೃಢೀಕರಿಸುವ ಸರಿಯಾದ ವಿಷಯಗಳು ಇಲ್ಲದ ಕಾರಣ ಅರ್ಜಿ ರದ್ದುಗೊಂಡಿತ್ತು. 2020ರಲ್ಲಿ ಯಡಿಯೂರಪ್ಪ ವಿರುದ್ಧ ಮತ್ತೊಂದು ಬಾರಿ ಭ್ರಷ್ಟಾಚಾರ ಕಾಯ್ದೆಯಡಿ ದೂರು ದಾಖಲಾಗಿತ್ತು. ಅದನ್ನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತ್ತು. ಮತ್ತೆ ಕ್ರಿಮಿನಲ್ ಮೊಕದ್ದಮೆ ಪ್ರಕ್ರಿಯೆ ಮಾಡಬಹುದು ಎಂದು 2021ರ ಜನವರಿ 5ರಂದು ನೀಡಿದ ಆದೇಶದಲ್ಲಿ ಹೇಳಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಯಡಿಯೂರಪ್ಪ-ಮುರುಗೇಶ್ ನಿರಾಣಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅದಾದ ಮೇಲೆ ಪ್ರಸ್ತುತ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಬಂಧನವಾಗದಂತೆ ಸುಪ್ರೀಂಕೋರ್ಟ್ನಿಂದ ರಕ್ಷಣೆ ಸಿಕ್ಕಿತ್ತು. ದೀಪಾವಳಿ ನಂತರ ಈ ಅರ್ಜಿ ವಿಚಾರಣೆ ಬರುವವರೆಗೂ ಯಡಿಯೂರಪ್ಪ ಮತ್ತು ನಿರಾಣಿ ನಿರಾಳವಾಗಿರಬಹುದು.
ಇದನ್ನೂ ಓದಿ: ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪ್ರಧಾನಿ ಗುರಿ ನೀಡಿದ್ದಾರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ