ಗದಗ: ಅಕ್ರಮವಾಗಿ ವಿಂಡ್ ಫ್ಯಾನ್ ನಿರ್ಮಾಣಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ವಿಂಡ್ ಫ್ಯಾನ್ ಕಂಪನಿ ಸಿಬ್ಬಂದಿಯನ್ನು ಪಂಚಾಯಿತಿ ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಆದರೆ, ಸಿಬ್ಬಂದಿಯನ್ನು ಪೊಲೀಸರು ಬಿಡಿಸಿ ಕಳುಹಿಸಿದ್ದರಿಂದ ಪೊಲೀಸರು ಮತ್ತು ರೈತರ ನಡುವೆ ಜಟಾಪಟಿ ನಡೆದು, ಕಾಲರ್ ಹಿಡಿದು ಎಳೆದಾಡಿಕೊಂಡಿದ್ದಾರೆ.
ಎನ್‌ಒಸಿ ಪಡೆಯದೆ, ಪಂಚಾಯಿತಿಗೆ ತೆರಿಗೆ ವಂಚಿಸಿ 70ಕ್ಕೂ ಹೆಚ್ಚು ವಿಂಡ್ ಫ್ಯಾನ್ ನಿರ್ಮಾಣ ಮಾಡಲಾಗಿದೆ. ಜತೆಗೆ ರೈತರ ಜಮೀನು ಗುತ್ತಿಗೆಯಲ್ಲೂ ಗೋಲ್ಮಾಲ್ ಮಾಡಲಾಗಿದೆ ಎಂದು ಆರೋಪಿಸಿರುವ ರೈತರು, ಲಕ್ಕುಂಡಿ ಪಂಚಾಯಿತಿಗೆ ವಿಂಡ್ ಫ್ಯಾನ್ ಕಂಪನಿ ಸಿಬ್ಬಂದಿಯನ್ನು ಕರೆಸಿಕೊಂಡು, ಕಚೇರಿಯಲ್ಲಿ ಕೂಡಿಹಾಕಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಿಬ್ಬಂದಿಯನ್ನು ಹೊರಬಿಡುವಂತೆ ಹೇಳಿದ್ದರಿಂದ ಜಗಳ ಶುರುವಾಗಿದೆ.
ಇದನ್ನೂ ಓದಿ | Puneet statue row : ಅಪ್ಪನಿಗೆ ಹುಟ್ಟಿದವನಾದ್ರೆ 5 ನಿಮಿಷ ಯುನಿಫಾರ್ಮ್ ಬಿಚ್ಚಿಟ್ಟು ಬಾ; ಎಸ್‌ಐಗೆ ನಾಡಗೌಡ ಪುತ್ರನ ಆವಾಜ್
ನಂತರ ಗದಗ ಗ್ರಾಮೀಣ ಠಾಣೆ ಸಿಪಿಐ ಚಂದ್ರು ಹರಿಹರ, ಪಿಎಸ್ಐ ಹಾಗೂ ವಕೀಲರು ಕಂಪನಿ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದರಿಂದ ರೈತರು ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸರು ಹಾಗೂ ರೈತರು ನಡುವೆ ಗಲಾಟೆ ನಡೆದು ಕಾಲರ್ ಹಿಡಿದು ಎಳೆದಾಡಿಕೊಂಡರು. ಇನ್ನು ರೈತರ ಪರವಾಗಿ ವಕಾಲತ್ತು ವಹಿಸಲು ಬಂದಿದ್ದ ವಕೀಲರ ಮೇಲೆ ಪೋಲಿಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವಿದೆ. ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ | Illicit liquor: ಅಕ್ರಮ ಮದ್ಯ ಮಾರಾಟ; ಮಾಲು ಸಮೇತ ಆರೋಪಿಯ ಬಂಧನ
ಮಧ್ಯವರ್ತಿಗಳು ರೈತರಿಂದ 7 ಲಕ್ಷ ರೂಪಾಯಿಗೆ 1 ಎಕರೆ ಭೂಮಿ ಖರೀದಿ ಮಾಡಿ, ಅದಕ್ಕೆ ಕಂಪನಿಯವರಿರಂದ 15 ಲಕ್ಷ ರೂಪಾಯಿ ಪಡೆಯುತ್ತಾರೆ. ವರ್ಷಕ್ಕೆ 38 ಸಾವಿರ ರೂಪಾಯಿ ರೈತರಿಗೆ ಗುತ್ತಿಗೆ ಹಣ ನೀಡುತ್ತಾರೆ, ಆದರೆ ಕಂಪನಿಯವರಿಂದ 70 ಸಾವಿರ ರೂಪಾಯಿ ಪಡೆದುಕೊಳ್ಳುತ್ತಾರೆ. ರೈತರಿಗೆ 3 ವರ್ಷದ ಪರಿಹಾರ ಮಾತ್ರ ಕೊಡಲಾಗಿದೆ. ಆದರೆ ಕಂಪನಿಯಿಂದ 30 ವರ್ಷದ ಪರಿಹಾರವನ್ನು ಮಧ್ಯವರ್ತಿಗಳು ಪಡೆಯುತ್ತಾರೆ ಎಂಬ ಆರೋಪ ರೈತರದ್ದಾಗಿದೆ. ಹೀಗಾಗಿ ವಿಂಡ್ ಕಂಪನಿ ಸಿಬ್ಬಂದಿಯನ್ನು ರೈತರು ಕೂಡಿಹಾಕಿದ್ದರು ಎನ್ನಲಾಗಿದೆ.