ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಲ್ಲಿ ಚುನಾವಣಾ (Karnataka Election) ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಮತ್ತು ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ಪುತ್ರ ಆರ್.ವಿ. ಯುವರಾಜ್ ಹಾಗೂ ತಂಡದ ನಡುವೆ ಘರ್ಷಣೆ ನಡೆದಿದೆ. ಮಾಜಿ ಶಾಸಕ ದೇವರಾಜ್ ಹಾಗೂ ಆತನ ಪುತ್ರ ಯುವರಾಜ್ ಇಬ್ಬರೂ ರೌಡಿಗಳೇ ಎಂದು ಕೆಜಿಎಫ್ ಬಾಬು ಹೇಳಿದ್ದರಿಂದ ಗಲಾಟೆ ಶುರುವಾಗಿದೆ.
ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಗಳ ನಡೆದಿದೆ. ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಭಾನುವಾರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಮಾಜಿ ಶಾಸಕ ದೇವರಾಜ್ ಹಾಗೂ ಆತನ ಪುತ್ರ ಯುವರಾಜ್ ಇಬ್ಬರೂ ರೌಡಿಗಳೇ ಎಂದು ಹೇಳಿದ್ದಾರೆ. ಇದಕ್ಕೆ ಆಕ್ರೋಶ ಹೊರಹಾಕಿದ ಯುವರಾಜ್ ಮತ್ತು ಬೆಂಬಲಿಗರು, ರಸ್ತೆಯಲ್ಲಿ ಹಾರ ಹಾಕಿಸಿಕೊಳ್ಳದಂತೆ ಕೆಜಿಎಫ್ ಬಾಬು ತಾಕೀತು ಮಾಡಿದ್ದಾರೆ. ಆಗ ಬೆಂಬಲಿಗರ ಮಧ್ಯೆ ಜೋರು ಜಗಳ ಶುರುವಾಗಿ ತಳ್ಳಾಟ ನೂಕಾಟ ನಡೆದಿದೆ. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದನ್ನೂ ಓದಿ | Karnataka Election : ಕೊನೆ ಪ್ರಚಾರದಲ್ಲೂ ಸಿಎಂ ಕನಸು ಬಿಚ್ಚಿಟ್ಟ ಡಿ.ಕೆ ಶಿವಕುಮಾರ್
ಮಸೀದಿ, ಚರ್ಚ್‌ಗೆ 25 ಲಕ್ಷ ರೂ. ಚೆಕ್; ಕೆಜಿಎಫ್ ಬಾಬು ವಿರುದ್ಧ ದೂರು
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮಸೀದಿ ಹಾಗೂ ಚರ್ಚ್‌ಗೆ 25 ಲಕ್ಷ ರೂಪಾಯಿ ಚೆಕ್ ನೀಡಿ ಮತ ಸೆಳೆಯಲು ಆಮಿಷ ಒಡ್ಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ಪುತ್ರ ಆರ್.ವಿ. ಯುವರಾಜ್, ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ | Karnataka Election: ಬಿಟಿಎಂ ಲೇಔಟ್ ಗಲಾಟೆ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಶ್ರೀಧರ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ
ಚಿಕ್ಕಪೇಟೆಯಲ್ಲಿ ಬಿಜೆಪಿಗೆ ಸೋಲುವ ಭಯ ಆರಂಭವಾಗಿದೆ. ಅದಕ್ಕೆ ಬಿಜೆಪಿ ಬಿ ಟೀಂ ಕೆಜಿಎಫ್ ಬಾಬುವನ್ನು ನಿಲ್ಲಿಸಿದ್ದಾರೆ. ಅವರು ಚೆಕ್‌ಗಳನ್ನು ವಿತರಿಸಿ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿರುವ ಆರ್.ವಿ. ದೇವರಾಜ್, ಚೆಕ್ ಮೇಲೆ ದಿನಾಂಕ ಮೇ 15 ನಮೂದಿಸಿ, ಚುನಾವಣೆಯಲ್ಲಿ ಗೆದ್ದರೆ ಮಾತ್ರ ಚೆಕ್ ಹಣ ಸಿಗಲಿದೆ. ಇಲ್ಲವಾದಲ್ಲಿ ಯಾವುದೇ ಹಣ ಸಿಗುವುದಿಲ್ಲ ಎಂದು ಹೇಳಿರುವುದಾಗಿ ಆಪಾದಿಸಿದ್ದಾರೆ.