Site icon Vistara News

ಲೋಕಾಯುಕ್ತ ಇರೋದೇ ಭ್ರಷ್ಟಾಚಾರ ತಡೆಯೋಕೆ; ಬಿಜೆಪಿ ಶಾಸಕನ ಪುತ್ರನ ಲಂಚ ಹಗರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

Approval for release of funds for various infrastructure projects in state cabinet meeting

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪನ ಪುತ್ರನ ಲೋಕಾಯುಕ್ತ ಬಲೆಗೆ ಬಿದ್ದಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಲೋಕಾಯುಕ್ತ ಮರುರಚನೆ ಮಾಡಿರುವುದೇ ಭ್ರಷ್ಟಾಚಾರ ತಡೆಯೋಕೆ. ಲೋಕಾಯುಕ್ತ ಸರ್ವಸ್ವತಂತ್ರವಾಗಿ ಕೆಲಸ ಮಾಡಲಿ’ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕನ ಪುತ್ರ ಪ್ರಶಾಂತ್​ ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾಗಿದ್ದರು. ಅವರು 40 ಲಕ್ಷಕ್ಕೂ ಅಧಿಕ ಲಂಚದ ಹಣದ ಜತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈಗಾಗಲೇ 40 ಪರ್ಸೆಂಟ್ ಕಮಿಷನ್​ ಸರ್ಕಾರ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸರ್ಕಾರಕ್ಕೆ ಇದೊಂದು ಮುಜುಗರದ ಸಂಗತಿಯೇ ಹೌದು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾರಂತ ರಾಷ್ಟ್ರ ಬಿಜೆಪಿ ನಾಯಕರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇಂದೂ ಸಹ ಅಮಿತ್ ಶಾ ಬೀದರ್​ಗೆ ಬಂದಿದ್ದಾರೆ. ಇಷ್ಟೆಲ್ಲದರ ಮಧ್ಯೆ ಬಿಜೆಪಿ ಶಾಸಕನ ಪುತ್ರನೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಈ ಬಗ್ಗೆ ಪ್ರತಿಪಕ್ಷಗಳು ವ್ಯಂಗ್ಯವಾಡಿದ್ದವು. ನಾವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದಾಗಲೆಲ್ಲ ಸಿಎಂ ಬಸವರಾಜ ಬೊಮ್ಮಾಯಿ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಇದೀಗ ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷಿ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದರು.

ಇದನ್ನೂ ಓದಿ: Lokayukta Raid: ಬಿಜೆಪಿ ಶಾಸಕನ ಪುತ್ರನ ಮನೆ-ಕಚೇರಿಗಳಲ್ಲಿ 7.62 ಕೋಟಿ ರೂ.ಪತ್ತೆ; ಕೆಎಸ್​ಡಿಎಲ್ ಎಂಡಿ ಮನೆಯಲ್ಲೂ ಶೋಧ

ಈಗ ಡಿಕೆಶಿ ಹೇಳಿಕೆಗೆ ತಿರುಗೇಟು ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಲೋಕಾಯುಕ್ತವನ್ನು ತೆಗೆಯಲಾಯಿತು. ಹೀಗಾಗಿ ಆಗ ನಡೆದ ಹಲವು ಕೇಸ್​ಗಳು ಮುಚ್ಚಿ ಹೋಗಿದ್ದವು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ಅದು ಇರುವುದೇ ಭ್ರಷ್ಟಾಚಾರ ನಿಯಂತ್ರಣಕ್ಕೆ. ತಪ್ಪು ಮಾಡಿದವರ ವಿರುದ್ಧ ತನಿಖೆಯಾಗಿ, ಶಿಕ್ಷೆಯಾಗಲಿ. ಕಾಂಗ್ರೆಸ್ ಕಾಲದ ಹಗರಣಗಳನ್ನೂ ಬಯಲಿಗೆಳೆಯಲಿ. ಯಾವ್ಯಾವ ಹಗರಣ ಇದೆಯೋ, ಅವೆಲ್ಲವೂ ತನಿಖೆಯಾಗುತ್ತದೆ ಎಂದು ಹೇಳಿದರು.

Exit mobile version