ಬೆಂಗಳೂರು: ಪ್ರತಿ ಗ್ರಾಮ ಪಂಚಾಯಿತಿ ವಿವೇಚನೆಗೆ ಆಸ್ತಿ ನಿರ್ವಹಣೆ ಮಾಡುವ ಸಲುವಾಗಿ ದುಪ್ಪಟ್ಟು ಅನುದಾನ ನೀಡಿ ಇದಕ್ಕಾಗಿ 2 ಸಾವಿರ ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ರಾಜಕೀಯ ವಿಕೇಂದ್ರೀಕರಣದ ಜತೆಗೆ ಆರ್ಥಿಕ ವಿಕೇಂದ್ರೀಕರಣವನ್ನೂ (Gandhi Grama Puraskara) ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿಸಿದ್ದ 2019-2020, 2020-2021 ಹಾಗೂ 2021-2022ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ-2023 ಹಾಗೂ ಪಂಚತಂತ್ರ 2.0 ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ತೆರಿಗೆ ಸಂಗ್ರಹದ ಪಿಒಎಸ್ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ | Reservation : ಎಸ್ಸಿ ಒಳಮೀಸಲಾತಿಗೆ ಸಂಪುಟ ಅಸ್ತು, ಅಲ್ಪಸಂಖ್ಯಾತರಿಗೆ ಇನ್ನು EWSನಲ್ಲಿ ಮಾತ್ರ ಅವಕಾಶ
ಗ್ರಾಮ ಪಂಚಾಯಿತಿಗಳಿಗೆ ಶಕ್ತಿ
ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರಿದ್ದಲ್ಲಿ ಆಡಳಿತ, ಅಭಿವೃದ್ಧಿಯಾಗಬೇಕು. ಬಾಪೂಜಿ ಕೇಂದ್ರದ ತಂತ್ರಾಂಶಗಳ ಮೂಲಕ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಲು ಬಾಪೂಜಿ 2.0ದಿಂದ ಅನುಕೂಲವಾಗಲಿದೆ. ಇದರ ಜತೆಗೆ ಸೇವಾ ಭತ್ಯೆಗಳನ್ನು ಒಂದು ಸಾವಿರದಿಂದ 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅಧ್ಯಕ್ಷರಿಗೆ 6 ಸಾವಿರ ರೂಪಾಯಿ ದೊರೆಯುವಂತೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಹಳಷ್ಟು ಮಹತ್ವ ನೀಡಲಾಗಿದ್ದು, ಬರುವ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಜನರಿಗೆ ಅತ್ಯಂತ ಹತ್ತಿರವಿರುವ ಸರ್ಕಾರ ಗ್ರಾಮ ಪಂಚಾಯಿತಿಯನ್ನು ಬಲಪಡಿಸಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ
ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ. ಅಬ್ದುಲ್ ನಜೀರ್ ಸಾಬ್ ಕರ್ನಾಟಕದ ಗ್ರಾಮೀಣಾಭಿವೃದ್ಧಿಯ ಹರಿಕಾರರಾಗಿದ್ದಾರೆ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಪ್ರಾರಂಭವಾಗಿ ನಮ್ಮದೆ ಕಾನೂನು ರೂಪಿಸಲಾಯಿತು. 73ನೇ ತಿದ್ದುಪಡಿ ತಂದು ದೇಶವ್ಯಾಪಿ ಕರ್ನಾಟಕದ ಮಾದರಿ ಅನುಷ್ಠಾನವಾಗಿದೆ. ಮೂರು ಹಂತದ ಪಂಚಾಯತ್ ವ್ಯವಸ್ಥೆ ಯಶಸ್ವಿಯಾಗಲು ಆರ್ಥಿಕ ಅಧಿಕಾರ ನೀಡಬೇಕೆಂಬ ಬೇಡಿಕೆ ಇತ್ತು ಎಂದರು.
ಇದನ್ನೂ ಓದಿ | Teacher Transfer : ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಗ್ರೀನ್ ಸಿಗ್ನಲ್; ಚುನಾವಣಾ ಆಯೋಗದ ಅನುಮತಿ ನಂತರ ಶುರು
ದೇಶದಲ್ಲಿಯೇ ನಂಬರ್ ಒನ್
ನರೇಗಾದಲ್ಲಿ ಕರ್ನಾಟಕದ ಪಂಚಾಯತ್ ರಾಜ್ ಇಲಾಖೆ ಅತ್ಯುತ್ತಮ ಕೆಲಸ ಮಾಡಿದ್ದು ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ. ನಿಗದಿಯಾದ ಗುರಿ ಮೀರಿ ಸಾಧನೆ ಮಾಡಿ ಹೆಚ್ಚುವರಿ ಅನುದಾನವನ್ನು ರಾಜ್ಯ ನಿರಂತರವಾಗಿ ಪಡೆದಿದೆ ಎಂದರು.
ಬದಲಾವಣೆಯ ನಿರೀಕ್ಷೆ
ನರೇಗಾದಿಂದ ಸಾಕಷ್ಟು ಆಸ್ತಿ ನಿರ್ಮಾಣವಾಗಿದೆ. ಸಾಕಷ್ಟು ಜನರಿಗೆ ಕೆಲಸ ದೊರೆತಿದೆ. ಇದನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕಾನೂನಿನಲ್ಲಿ ಕೆಲವು ಬದಲಾವಣೆ ತರಬೇಕಾಗಿತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆಗಳಿಗೆ ನರೇಗಾ ಬಳಕೆ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಬಳಿ ಮಾತನಾಡಿದ್ದು, ಶೀಘ್ರದಲ್ಲಿಯೇ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ ಪಂಚಾಯಿತಿಗಳಿಗೆ ದುಪ್ಪಟ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.