ಕಾರವಾರ: ಕನ್ನಡದ ಪ್ರಥಮ ರಾಜಧಾನಿಯಾದ ಉತ್ತರ ಕನ್ನಡ ಜಿಲ್ಲೆ ಬನವಾಸಿಯಲ್ಲಿ ಎರಡು ದಿನಗಳ (ಫೆ.28 ಮತ್ತು ಮಾ.1) ಕದಂಬೋತ್ಸವ-2023ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಯಾತ್ರಾ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯ ಸೇರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪುರಾತನ ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣ
ಈ ಭಾಗದಲ್ಲಿ ನೀರಾವರಿಗೆ ಕೊರತೆಯಾಗದಂತೆ ಬನವಾಸಿ ಏತ ನೀರಾವರಿ ಯೋಜನೆಯ ಮೂಲಕ 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯವನ್ನಾಳಿದ ಶ್ರೇಷ್ಠ ಆಡಳಿತಗಾರರಾದ ಕದಂಬರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರ ಸಾಮ್ರಾಜ್ಯದ ಗತವೈಭವವನ್ನು ಪರಿಚಯಿಸುವ ಯೋಜನೆಗೆ ವಿಶೇಷ ಅನುದಾನವನ್ನು ಮೀಸಲಿರಿಸಿದೆ. ಆ ಕಾಲದ ಐತಿಹಾಸಿಕ ಮಹತ್ವವುಳ್ಳ ಪುರಾತನ ದೇವಾಲಯಗಳ ವಿಶೇಷವಾದ ಕಾರಿಡಾರ್ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗುವುದು. ಆದಿಕವಿ ಪಂಪ ಕವಿಯ ಹುಟ್ಟೂರು ಅಣ್ಣಿಗೇರಿಯ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ನೀಡಲಾಗಿದೆ ಎಂದರು.
ಇದನ್ನೂ ಓದಿ | Sirsi News: ಕಾಗೇರಿ ಜನ ರಾಜಕಾರಣ ಮಾಡಿದವರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬನವಾಸಿಯಲ್ಲಿ ಕನ್ನಡ ಭಾಷೆಗೆ ಮುನ್ನುಡಿ
ಕದಂಬರು ಇಲ್ಲದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ. ಪರಕೀಯರ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಮಯೂರವರ್ಮ ಕದಂಬರ ಸಾಮ್ರಾಜ್ಯವನ್ನು ಸ್ಥಾಪಿಸಿ ಬನವಾಸಿಯನ್ನು ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿದರು. ಬನವಾಸಿ ಕನ್ನಡ ನಾಡಿನ ಪ್ರಥಮ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಕನ್ನಡ ಆದಿಕವಿ ಪಂಪರು, ಬನವಾಸಿಯ ನಾಡಿನಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಭಾಷೆಗೆ ಮುನ್ನುಡಿ ಬರೆದರು. ಇಲ್ಲಿ ಅಲ್ಲಮಪ್ರಭುಗಳ ಶ್ರೀಮಠವಿದ್ದು, ಅಲ್ಲಮಪ್ರಭುಗಳ ವಿಚಾರಧಾರೆಗಳು ಮಾರ್ಗದರ್ಶಿಯಾಗಿದೆ. ಮಧುಕೇಶ್ವರ ದೇವಸ್ಥಾನ ಕದಂಬರ ರಾಜ ವೈಭವ, ಶಿಲ್ಪಕಲೆಯನ್ನು ಬಿಂಬಿಸುವ ಐತಿಹಾಸಿಕ ಪುರಾತನ ದೇವಸ್ಥಾನವಾಗಿದೆ. ಗತವೈಭವ ಹೊಂದಿರುವ ಬನವಾಸಿ ಇಂದು ಕೃಷಿಯ ನಾಡಾಗಿದ್ದು, ಫಲವತ್ತಾದ ಭೂಮಿಯನ್ನು ಹೊಂದಿದೆ ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ್ ಹೆಬ್ಬಾರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕದಂಬೋತ್ಸವ ಸ್ತಬ್ಧಚಿತ್ರ ಅದ್ಧೂರಿ ಮೆರವಣಿಗೆ
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ ಸ್ತಬ್ಧಚಿತ್ರ ಮೆರವಣಿಗೆಗೆ ಮಂಗಳವಾರ ಬೆಳಗ್ಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಕುಂಭಮೇಳ ಹಾಗೂ ಪಥ ಸಂಚಲನ ಭಾರತ ಸೇವದಳ, ಸ್ಕೌಟ್ಸ್ ಮತ್ತು ಗೈಡ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ವಿವಿಧ ಸರ್ಕಾರದ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ | Environment University : ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ; ಸಿಎಂ ಬೊಮ್ಮಾಯಿ
ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು ಕದಂಬ ವೃತ್ತದ ಮೂಲಕ ಸಾಗಿ ಕದಂಬೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ರಾಜ ಮಹಾರಾಜರ ವೇಷಭೂಷಣಗಳು, ಸಿದ್ದರ ಕುಣಿತ, ಗೌಳಿ ಕುಣಿತ, ವೀರಗಾಸೆ, ಲಮಾಣಿ ನೃತ್ಯ, ಕಲಾಮೇಳ, ರಾಧೆ ಕೃಷ್ಣರ ವೇಷ, ತೆಕ್ಕೆ ಕುಣಿತ ಸೇರಿ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.