ಬೆಂಗಳೂರು: ದೀರ್ಘಾವಧಿಯಿಂದ ನನೆಗುದಿಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಹಾಗೂ ಸಂಘದ ಪದಾಧಿಕಾರಿಗಳು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಶಿಕ್ಷಕರ ವರ್ಗಾವಣೆ (Teachers Transfer) ಪ್ರಕ್ರಿಯೆ ಬಗ್ಗೆ ಶುಕ್ರವಾರ ಚರ್ಚೆ ನಡೆಸಿದರು.
ವರ್ಗಾವಣೆಗಾಗಿ ಈಗಾಗಲೇ 79 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಆಯಾ ತಾಲೂಕಿನ ಒಳಗಡೆ ವರ್ಗಾವಣೆ ಮಾಡಬೇಕು. ದೀರ್ಘಕಾಲದಿಂದ ನನೆಗುದಿಯಲ್ಲಿರುವ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಇದನ್ನೂ ಓದಿ | KSRTC Employees Strike: ಸಾರಿಗೆ ನೌಕರರ ವೇತನ ಶೇ.15 ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ
ಶಿಕ್ಷಕರ ಸಮಸ್ಯೆ ಹಾಗೂ ಸಂಘದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಯಾವುದೇ ವರ್ಗಾವಣೆ ಮಾಡಬೇಕಾಗಿದ್ದಲ್ಲಿ ರಾಜ್ಯ ಚುನಾವಣಾ ಆಯೋಗದ ಅನುಮತಿ ಪಡೆಯುವಂತೆ ಸುತ್ತೋಲೆ ಹೊರಡಿಸಿರುವುದರಿಂದ ಆಯೋಗದ ಅನುಮತಿ ಪಡೆದು ಆರಂಭಿಸಲಾಗುತ್ತದೆ. ಮಾ.19ರಂದು ಶಿಕ್ಷಕರ ವರ್ಗಾವಣೆ ಕಡತಕ್ಕೆ ಅನುಮೋದನೆ ನೀಡಿ ವರ್ಗಾವಣೆ ಪ್ರಕ್ರಿಯೆಗೆ ನಿರ್ದೇಶನ ನೀಡುತ್ತೇನೆ ಎಂದು ಸ್ಪಷ್ಟ ಭರವಸೆ ನೀಡಿದರು. ಸಿಎಂ ಭರವಸೆಯು ವರ್ಗಾವಣೆ ನಿರೀಕ್ಷಣೆಯಲ್ಲಿದ್ದ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.