ಬೆಂಗಳೂರು: ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳು ಸ್ತ್ರೀ ಸಾಮರ್ಥ್ಯ ಬ್ರ್ಯಾಂಡ್ ಆಗಿ ಅಭಿವೃದ್ಧಿಗೊಳ್ಳಬೇಕು. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ಗ್ರಾಮಿಣ ಪ್ರದೇಶದಲ್ಲಿ ಆರ್ಥಿಕ ಕ್ರಾಂತಿ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ (International Women’s Day) ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದ್ದ “ಸ್ತ್ರೀ ಸಾಮರ್ಥ್ಯ – ನಮೋ ಸ್ತ್ರೀ” ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
10 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಡಿಬಿಟಿ ಮೂಲಕ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿ ವಾರಕ್ಕೆ 10 ಸಾವಿರ ಸಂಘಕ್ಕೆ ನೇರವಾಗಿ ಖಾತೆಗೆ ಅನುದಾನ ನೀಡಿ, ಉತ್ಪನ್ನಗಳ ತಯಾರಿಕೆಗೆ ತರಬೇತಿ, ಯಂತ್ರಗಳ ಖರೀದಿ, ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ರೀತಿ ಸ್ವಾವಲಂಬಿ, ಸ್ವಾಭಿಮಾನದ ಬದುಕು ನಡೆಸಲು, ಆದಾಯ ಹೆಚ್ಚಿಳ ಹಾಗೂ ಜೀವನ ಗುಣಮಟ್ಟ ಸುಧಾರಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.
ಇದನ್ನೂ ಓದಿ | Siddaramaiah: ಗೋಮಾಳಗಳನ್ನು ಆರ್‌ಎಸ್‌ಎಸ್‌ಗೆ ನೀಡುತ್ತಿದೆ ಬಿಜೆಪಿ ಸರ್ಕಾರ: ಹಾಲು ಉತ್ಪಾದಕರ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್
50 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 500 ಕೋಟಿ ರೂ.
ಕರ್ನಾಟಕ ರಾಜ್ಯಕ್ಕೆ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ವಿಸ್ತರಿಸುವ ಮೂಲಕ 50 ಸಾವಿರ ಸ್ತೀ ಶಕ್ತಿ ಸಂಘಗಳಿಗೆ 500 ಕೋಟಿ ರೂ.ಗಳನ್ನು ವಿತರಿಸಲಾಗುವುದು. ಬ್ಯಾಂಕ್‌ಗಳ ಸಹಾಯದಿಂದ ಸುಮಾರು 2 ರಿಂದ 3 ಸಾವಿರ ಕೋಟಿ ರೂ.ಗಳಷ್ಟು ಬಂಡವಾಳಕ್ಕೆ ನೆರವು ನೀಡಿ, 30 ಸಾವಿರ ಕೋಟಿಗಳ ವಹಿವಾಟಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದ ಜಿಡಿಪಿಗೆ ಸ್ತ್ರೀ ಶಕ್ತಿ ಸಂಘಗಳು ದೊಡ್ಡ ಕೊಡುಗೆಯನ್ನು ನೀಡುವಂತಾಗಬೇಕು ಎಂಬ ಚಿಂತನೆ ಸರ್ಕಾರದ್ದಾಗಿದೆ. ಈ ಯೋಜನೆಯಿಂದ ಸುಮಾರು 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ನೀಡಲಾಗಿದ್ದು, ಎಲ್ಲರೂ ಸದುಪಯೋಗ ಪಡೆಯಬೇಕು ಎಂದರು.
ಇದನ್ನೂ ಓದಿ | Cabinet Meeting: ರಾಜ್ಯ ಸಂಪುಟ ಸಭೆ; ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಅಸ್ತು
50 ಸಾವಿರ ಸಂಘಗಳ ನೋಂದಣಿ
ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಈಗಾಗಲೇ 50 ಸಾವಿರ ಸಂಘಗಳು ನೋಂದಣಿಯಾಗಿವೆ. ಮಹಿಳೆಯರಿಗೆ ದುಡಿಯುವ ಶಕ್ತಿ ಇದ್ದು, ಅದೇ ಅವರ ಬಂಡವಾಳವಾಗಿದೆ. ಕೆಲವರು ಗ್ಯಾರಂಟಿ ಕಾರ್ಡ್ ಕೊಡಲಾಗುವುದು ಎಂದು ಘೋಷಿಸುತ್ತಾರೆ. ಯಾವುದೇ ಬಂಡವಾಳದ ಖಾತ್ರಿಯಿಲ್ಲದೇ ಗ್ಯಾರಂಟಿ ಕಾರ್ಡ್ ಕೊಟ್ಡು ಜನರನ್ನು ಯಾಮಾರಿಸುತ್ತಿದ್ದಾರೆ. ಜನರಿಗೆ ಅವರ ಭಿಕ್ಷೆ ಬೇಡ, ಅವಕಾಶ ಬೇಕು. ನಮ್ಮ ಸರ್ಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯೋಜನೆಗಳನ್ನು ಘೋಷಿಸಿದ್ದು, ಅದರಂತೆ ಜಾರಿಗೆ ತರಲಾಗಿದೆ. ತಾಯಂದರಿಗೆ ಪೌಷ್ಟಿಕ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ. ಹೆಣ್ಣು ಮಕ್ಕಳು, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ , ಪಿಯುಸಿಯಿಂದ ಡಿಗ್ರಿವರೆಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದರು.
ಐ.ಟಿ. ಬಿಟಿ, ಕೌಶಲಾಭಿವೃದ್ದಿ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.