Site icon Vistara News

ಮಂಕಿಪಾಕ್ಸ್ ತಡೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಮಂಕಿ ಪಾಕ್ಸ್ ಹರಡದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಂಕಿಪಾಕ್ಸ್ ನಿಯಂತ್ರಣ ಸಂಬಂಧಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಯಾವ ಯಾವ ಸಲಹೆ ಸೂಚನೆಗಳನ್ನು ನೀಡಿದರು ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ | ಭಾರತದಲ್ಲಿ ಮಂಕಿಪಾಕ್ಸ್​ ಪ್ರಕರಣ 7ಕ್ಕೆ ಏರಿಕೆ; ಯುಎಇಯಿಂದ ಕೇರಳಕ್ಕೆ ಬಂದಿದ್ದವನಲ್ಲಿ ಸೋಂಕು

1. ದೇಶದಲ್ಲಿ ಆರು ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿದೆ. ಹಾಗಾಗಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಸೋಂಕಿತರ ಪರೀಕ್ಷೆಗೆ ಸೂಕ್ತ ಕ್ರಮ ವಹಿಸಬೇಕು.

2. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಂತೆ ಸೋಂಕು ದೃಢಪಟ್ಟ ವ್ಯಕ್ತಿಗಳನ್ನು 21 ದಿನಗಳ ಕ್ವಾರಂಟೈನ್ ಮಾಡುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

3. ಸೋಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಬಹುದಾದ ಖಾಸಗಿ ಸಂಸ್ಥೆಗಳನ್ನು ಗುರುತಿಸಬೇಕು.

4. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು.

5. ಮಂಕಿಪಾಕ್ಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಬೇಕು.

ಕ್ವಾರಂಟೈನ್‌ ಕೇಂದ್ರಗಳ ಗುರುತು: ರಾಜ್ಯದ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ವ್ಯಕ್ತಿಗಳ ಪರೀಕ್ಷಾ ವರದಿ ನೆಗೆಟಿವ್ ಇದೆ. ಬೆಲ್ಜಿಯಂನಿಂದ ಪ್ರಯಾಣ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಬೆಂಗಳೂರಿನ ಸಾಂಕ್ರಾಮಿಕ ರೋಗಗಳ (ಇಡಿ) ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಕ್ವಾರಂಟೈನ್‌ಗಾಗಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಡಾ.ಅರುಂಧತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಶ್ರೀಕರ್, ಆರೋಗ್ಯ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ.ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ದೇಶದಲ್ಲಿ 8ನೇ ಮಂಕಿಪಾಕ್ಸ್ ಪ್ರಕರಣ; ಹೆದರಬೇಡಿ ಎಂದು ಧೈರ್ಯ ತುಂಬಿದ ಕೇಂದ್ರ ಆರೋಗ್ಯ ಸಚಿವ

Exit mobile version