ಬೆಂಗಳೂರು: ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸೋಮವಾರ ಸಂಜೆ ನಗರದ ರೇಸ್ ಕೋರ್ಸ್ ರಸ್ತೆಗೆ ‘ರೆಬೆಲ್ ಸ್ಟಾರ್ ಅಂಬರೀಶ್ ರಸ್ತೆ’ (Actor Ambareesh) ಎಂದು ಮರು ನಾಮಕರಣ ಮಾಡಿದ ಬಳಿಕ, ನಗರದ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ನಂತರ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜೀವನದಲ್ಲಿ ಯಾವತ್ತೂ ಅಂಬಿ ತನಗೆ ಇಂತಹದ್ದು ಬೇಕು ಅಂತ ಬಯಸಿದವರಲ್ಲ. ಸಿನಿಮಾ ರಂಗ ಹಾಗೂ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂಬಿಯದ್ದು ಯಾವತ್ತೂ ಕೊಟ್ಟ ಕೈ ಆಗಿದೆಯೇ ಹೊರತು ಪಡೆದ ಕೈ ಅಲ್ಲ. ಜನರ ಪ್ರೀತಿಯೊಂದೆ ಅವರು ಬಯಸಿದ್ದು, ಅದು ಸಿಕ್ಕಿದೆ, ಸಿಗುತ್ತಿದೆ ಎಂದರು.
ಅಂಬರೀಶ್ ಏನೇನು ಕೆಲಸ ಮಾಡಿದ್ದರು ಎಂಬುವುದು ಮಂಡ್ಯದ ಜನರನ್ನು ಕೇಳಿದರೆ ಸಾಕು. ಯಾವ ಕೆಲಸ ಮಾಡಿಕೊಟ್ಟರೂ ಕ್ರೆಡಿಟ್ ಯಾವತ್ತೂ ತಗೊಂಡಿಲ್ಲ. ಅಂಬರೀಶ್ ಎಂದರೆ ಎನರ್ಜಿ, ಅವರ ವ್ಯಕ್ತಿತ್ವದಲ್ಲೇ ಎನರ್ಜಿ ಇತ್ತು. ಎಲ್ಲೇ ಹೋದರೂ ಸಂತೋಷ ಹಂಚುತ್ತಿದ್ದ. ಯಾವುದೇ ಗಂಭೀರ ಚರ್ಚೆಯಾದರೂ ಅಲ್ಲಿ ಅಂಬಿ ಇದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಅಂಬರೀಶ್ ಸಹಜ ಜೀವನ ನಡೆಸಿದ್ದಾರೆ, ಒಬ್ಬ ವ್ಯಕ್ತಿ ಆತ್ಮಸಾಕ್ಷಿ ಒಪ್ಪುವಂತೆ ಬದುಕುವುದು ಕಷ್ಟ. ಆದರೆ, ಆ ರೀತಿಯಲ್ಲಿ ಅಂಬರೀಶ್ ಬದುಕಿದ್ದಾನೆ. ಆದರೆ, ನಾವೆಲ್ಲ ಆತ್ಮಸಾಕ್ಷಿ ಪಕ್ಕಕ್ಕಿಟ್ಟು ಬದುಕುತ್ತಿದ್ದೇವೆ. ಅಂಬಿಗೆ ನಟನೆ ಮಾಡುವುದು ಕಷ್ಟ ಆಗುತ್ತಿರಲಿಲ್ಲ. ಸಹಜ, ಲೀಲಾಜಾಲವಾಗಿ ನಟಿಸುತ್ತಿದ್ದ ಎಂದು ಸ್ಮರಿಸಿದರು.
ಇದನ್ನೂ ಓದಿ | Actor Ambareesh: ರೇಸ್‌ಕೋರ್ಸ್ ರಸ್ತೆ ಇನ್ಮುಂದೆ ರೆಬೆಲ್‌ಸ್ಟಾರ್ ಅಂಬರೀಶ್ ರೋಡ್; ನಾಮಕರಣ ಮಾಡಿದ ಸಿಎಂ
ಸುಮಲತಾ ಕಣ್ಣೀರು
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಅಂಬರೀಶ್ ದೇವರ ಮಗ. ದೇವರ ಮಗನ ಜತೆ 22 ವರ್ಷ ಧರ್ಮಪತ್ನಿಯಾಗಿ ಬದುಕಲು ಅವಕಾಶ ಸಿಕ್ಕಿತ್ತು. ಅವರ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿ ಕಣ್ಣೀರಿಡುತ್ತಾ ಭಾವುಕರಾದರು.
ಅಂಬರೀಶ್ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ: ಸಿಎಂ ಬೊಮ್ಮಾಯಿ
ಬೆಂಗಳೂರು: ಅಂಬರೀಶ್ ಅವರ ನೆನಪಿಗಾಗಿ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂದು ಸಂತೋಷದಿಂದ ಮರುನಾಮಕರಣ ಮಾಡಿದ್ದೇವೆ. ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಅವರ ಹೆಸರನ್ನು ಇಟ್ಟಿದ್ದೇವೆ. ಕರ್ನಾಟಕದ ರೆಬಲ್ ಸ್ಟಾರ್, ಎಲ್ಲರ ಮನಸ್ಸನ್ನು ಗೆದ್ದಂತಹ ನೇರ, ದಿಟ್ಟ ವ್ಯಕ್ತಿತ್ವದ ಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ರೇಸ್ ಕೋರ್ಸ್ ರಸ್ತೆಗೆ ಅವರ ಹೆಸರು ಇಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮೌರ್ಯ ಸರ್ಕಲ್‌ನಿಂದ ಬಸವೇಶ್ವರ್ ಸರ್ಕಲ್‌ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ. ಎಂ. ಎಚ್ ಅಂಬರೀಶ್ ರಸ್ತೆ ಎಂದು ಮರು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ವಿಶೇಷ ಪ್ರತಿಭೆಯಿರುವ ಮೇರು ವ್ಯಕ್ತಿತ್ವ ಅಂಬರೀಶ್ ಅವರದ್ದಾಗಿದೆ. ರೀಲ್ ಆ್ಯಂಡ್ ರಿಯಲ್ ಲೈಫ್ ಎರಡು ಒಂದೆಯಾಗಿದ್ದು, ನೇರ ವ್ಯಕ್ತಿತ್ವ ಅವರದ್ದಾಗಿತ್ತು. ಕ್ರೀಡೆಯಲ್ಲೂ ಪ್ರತಿಭೆಯನ್ನು ಹೊಂದಿದ್ದ ಅವರು, ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ | Rishab Shetty: ರಿಷಬ್ ಶೆಟ್ಟಿಗೆ ಗೇಮ್ ಚೇಂಜರ್ ಅವಾರ್ಡ್, ಕಾಂತಾರ ನಟನಿಂದ ಕನ್ನಡಿಗರಿಗೆ ಧನ್ಯವಾದ
ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ನಟ ರಾಘವೇಂದ್ರ ರಾಜ್ ಕುಮಾರ್, ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ , ರಾಕ್ ಲೈನ್ ವೆಂಕಟೇಶ್, ಚಿನ್ನೆಗೌಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.