Site icon Vistara News

ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಶೀಘ್ರ ಚಾಲನೆ: CM ಬೊಮ್ಮಾಯಿ ಭರವಸೆ

government employees spoerts

ಬೆಂಗಳೂರು: ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗಾಗಿ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2022 ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 7ನೇ ವೇತನ ಆಯೋಗ ರಚನೆ ಮಾಡಲು ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಪ್ರಮುಖ ಕಾರಣರು. ಈ ವರ್ಷದಲ್ಲಿ 7ನೇ ವೇತನ ಆಯೋಗ ರಚಿಸಿ, ಸರ್ಕಾರಿ ನೌಕರರ ವೇತನದ ತಾರತಮ್ಯವನ್ನು ಸರಿದೂರಿಸಲು ತೀರ್ಮಾನಿಸಲಾಗಿದೆ. ಸರ್ಕಾರಿ ನೌಕರರು ಸಂತೋಷದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ರಾಜ್ಯದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದರು.

ನಿಗದಿತ ಸಮಯದಲ್ಲಿ ಬಡವರ ಕೆಲಸ ನಿರ್ವಹಿಸಿ: ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ರಾಜ್ಯ ಪ್ರಗತಿಪಥದಲ್ಲಿ ನಡೆಯಲು ಪ್ರಗತಿಪರ ಚಿಂತನೆ, ನಾಯಕತ್ವ ಮತ್ತು ಆಡಳಿತ ವ್ಯವಸ್ಥೆ ಇರಬೇಕು. ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸರ್ಕಾರಿ ನೌಕರರ ಕರ್ತವ್ಯ ಬಹಳ ಮುಖ್ಯ. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ, ನಿಮ್ಮ ಕೆಲಸ ಬಡವನಿಗೆ ಮುಟ್ಟಿದರೆ ಪುಣ್ಯಪ್ರಾಪ್ತಿಯಾಗುತ್ತದೆ. ನಿಗದಿತ ಸಮಯದಲ್ಲಿ ಬಡವರಿಗಾಗಿ ಇರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಆಸಕ್ತಿ ವಹಿಸಬೇಕು. ಸರ್ಕಾರಿ ನೌಕರರು ಉತ್ತಮ ಸೇವೆ ಸಲ್ಲಿಸಿದರೆ, ಅವರಿಗೆ ಸವಲತ್ತುಗಳನ್ನು ನೀಡಲು ಯಾವ ತೊಂದರೆಯೂ ಇಲ್ಲ ಎಂದರು.

ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಾಗಿದ್ದು, ರಾಜ್ಯವನ್ನು ಉನ್ನತ ಮಟ್ಟಕ್ಕೆ ತಲುಪಿಸಲು ಒಗ್ಗಾಟ್ಟಾಗಿ ದುಡಿಯಬೇಕು. ಆಳುವವರು ಮತ್ತು ಆಡಳಿತಕ್ಕೆ ಸಂಯೋಜನಾತ್ಮಕ ಸಂಬಂಧವಿದ್ದು, ಇವೆರಡೂ ಚಕ್ರಗಳು ರಾಜ್ಯದ ಪ್ರಗತಿಯ ರಥವನ್ನು ಮುನ್ನಡೆಸುತ್ತದೆ. ಅಂತಹ ರಾಜ್ಯ ಪ್ರಗತಿಯನ್ನು ಸಾಧಿಸುತ್ತದೆ. ರಾಜ್ಯ ಹಲವಾರು ರಂಗದಲ್ಲಿ ಹೆಸರು ಗಳಿಸಿದ್ದರೆ, ಅದರಲ್ಲಿ ಸರ್ಕಾರಿ ನೌಕರರ ಪಾಲು ದೊಡ್ಡದಿದೆ ಎಂದರು.

ಕೋವಿಡ್‌ನ ಯಶಸ್ವಿ ನಿರ್ವಹಣೆ
ಕೊರೋನಾ ಸಾಂಕ್ರಾಮಿಕವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಸರ್ಕಾರಿ ನೌಕರರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಕೊರೋನಾ ಯೋಧರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ರಾಜ್ಯ ಕೋವಿಡ್ ಸಂಕಷ್ಟದಿಂದ ಶೀಘ್ರದಲ್ಲಿ ಹೊರಬಂದು ಆರ್ಥಿಕ ಚೇತರಿಕೆ ಕಾಣಲು ಸಾಧ್ಯವಾಯಿತು. ವಿವಿಧ ತೆರಿಗೆಗಳಿಂದ ₹15,000 ಕೋಟಿ ಆದಾಯ ಗಳಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಯಾವುದೇ ಕಡಿತವಿಲ್ಲದೇ ಪೂರ್ಣಪ್ರಮಾಣದ ವೇತನ ನೀಡುವ ತೀರ್ಮಾನ, ಯಡಿಯೂರಪ್ಪ ಅವರಿಗೆ ಸರ್ಕಾರಿ ನೌಕರರ ಹಿತಾಸಕ್ತಿಯ ಪ್ರತೀಕವಾಗಿದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಷಡಕ್ಷರಿಯವರ ನಾಯಕತ್ವದಿಂದ ಹೊಸ ಚೈತನ್ಯ ಬಂದಿದೆ. ಸಂಘದ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ | ಉತ್ತರ ಪ್ರದೇಶ ಅಪಘಾತದಲ್ಲಿ ಏಳು ಕನ್ನಡಿಗರ ಸಾವು: ಯೋಗಿ ಆದಿತ್ಯನಾಥ ಜತೆ CM ಬೊಮ್ಮಾಯಿ ಮಾತು

Exit mobile version