Site icon Vistara News

Narayanaguru Nigama : ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ; ಈಡೇರಿತು ಬಿಲ್ಲವ/ಈಡಿಗ ಸಮುದಾಯದ ಬಹುಕಾಲದ ಬೇಡಿಕೆ

Narayana guru

#image_title

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿರುವ ಈಡಿಗ- ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ಸ್ಥಾಪನೆಯನ್ನು (Narayanaguru Nigama) ಘೋಷಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಬಿಲ್ಲವ/ಈಡಿಗ ಸಮುದಾಯದ ಬಹುಕಾಲದ ಬೇಡಿಕೆಗೆ ಸ್ಪಂದಿಸಿದಂತಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಿಗಮ ಸ್ಥಾಪನೆಯ ಆದೇಶವನ್ನು ಹೊರಡಿಸಿದ್ದು, ಈ ವರ್ಗದ ನಾಯಕರಲ್ಲಿ ಸಂತಸವನ್ನು ಉಂಟು ಮಾಡಿದೆ. ನಿಗಮ ಸ್ಥಾಪನೆಯ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ ಅವರು, ‘ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ’ ಎಂದು ಹೇಳಿದ್ದಾರೆ.

ನಿಗಮ ರಚನೆಯ ಆದೇಶ ಪತ್ರ

26 ಜಾತಿಗಳ ಶೈಕ್ಷಣಿಕ ಮತ್ತು ಉದ್ಯೋಗ ನೇಮಕಾತಿಗೆ ಮೀಸಲು

ಸಂವಿಧಾನದ ಅನುಚ್ಛೇದ-15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳನ್ನು ಗುರುತಿಸಿ ಜಾತಿ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ. ಅದರನ್ವಯ ಸದರಿ ಜಾತಿ ಪಟ್ಟಿಯಲ್ಲಿ ಪವರ್ಗ 2’ಎ’ಯ ಕ್ರಮಸಂಖ್ಯೆ 4(a)ಯಿಂದ (z)ವರೆಗೆ ನಮೂದಾಗಿರುವ ಈಡಿಗ ಸೇರಿದಂತೆ ಒಟ್ಟು 26 ಜಾತಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಇಲಾಖೆಯ ಅಧೀನನ ಕಾರ್ಯದರ್ಶಿ ಷಾಹಿನ್ ಪರ್ವಿನ್ ಆದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ ಸ್ವಾಗತ

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಿಗಮ ಸ್ಥಾಪನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

”ರಾಜ್ಯದ ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂಬುದು ಸಮುದಾಯದ ಬಹುದಿನಗಳ ಬೇಡಿಕೆಯಾಗಿತ್ತು. ಸಮುದಾಯದ ಕನಸನ್ನು ನನಸು ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಘೋಷಿಸಿದ ಕ್ಷಣ

ಎರಡು ದಿನದ ಗಡುವು ಕೇಳಿದ್ದ ಕೋಟ ಶ್ರೀನಿವಾಸ ಪೂಜಾರಿ

ಇನ್ನು ಎರಡು ದಿನಗಳಲ್ಲಿ ನಾರಾಯಣ ಗುರು ನಿಗಮ ರಚನೆಯಾಗಲಿದೆ. ಯಾರೂ ಕೂಡಾ ಗೊಂದಲ ಮಾಡಿಕೊಳ್ಳಬಾರದು ಎಂದು ಎರಡು ದಿನಗಳ ಹಿಂದಷ್ಟೇ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದರು. ನಿಗಮ ಸ್ಥಾಪನೆ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಮಾತನಾಡಲು ಸಹಕರಿಸಿದ ಸಂಸದ ನಳಿನ್‌ ಕುಮಾರ್‌, ಸಚಿವರಾದ ಸುನಿಲ್‌ ಕುಮಾರ್‌ ಹಾಗೂ ಇತರರಿಗೆ ಕೋಟ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ : Shivaji Jayanti: ಭಾರತ ಚರಿತ್ರೆ ಬದಲಿಸಿದ ಯುಗ ಪುರುಷನೇ ಶಿವಾಜಿ: ಸಿಎಂ ಬೊಮ್ಮಾಯಿ

Exit mobile version