Site icon Vistara News

CM Bommai | ಬಳ್ಳಾರಿಯಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೂಮಿ ಪೂಜೆ, ರಾಜ್ಯದಲ್ಲೇ ದಾಖಲೆ

ವಿಜಯ ನಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆ

ಬಳ್ಳಾರಿ: ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು ಅವರು ಹೇಳಿದರು.

ʻʻಇಡೀ ಕರ್ನಾಟಕದಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲೂ ಇಲ್ಲ. ಇಲಾಖೆಯಿಂದ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾವಾಗುತ್ತದೆ. ಆದರೆ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ಜಿಂದಾಲ್ ಸಂಸ್ಥೆ ಕಟ್ಟಿಕೊಡಲು ಒಪ್ಪಿದ್ದು, ಸರ್ಕಾರ ಸಲಕರಣೆಗಳನ್ನು ಒದಗಿಸಲಿದೆ. 400 ಹಾಸಿಗೆಗಳ ಆಸ್ಪತ್ರೆ, ಸಮಗ್ರ ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಹಾಗೂ ತಾಯಂದಿರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿದೆ ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿದೆ. ಇದು ರಾಜ್ಯದಲ್ಲೇ ಅತಿ ದೊಡ್ಡ ಮಾತ್ರವಲ್ಲ ಮಾದರಿ ಆಸ್ಪತ್ರೆಯಾಗಲಿದೆʼʼ ಎಂದರು ಬೊಮ್ಮಾಯಿ.

ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನ
ʻʻನಮ್ಮ ದೇಶದಲ್ಲಿ ಪೌಷ್ಟಿಕತೆ ಮುಖ್ಯವಾದ ಸವಾಲಾಗಿದೆ. ಪೌಷ್ಟಿಕತೆಯ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಪದೇಪದೆ ಕಾಯಿಲೆಗೆ ಒಳಗಾಗುತ್ತಾರೆ. ಇದನ್ನು ಪರಿಹರಿಸುವುದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆʼʼ ಎಂದು ಸಿಎಂ ಹೇಳಿದರು.

ʻʻಅಪೌಷ್ಟಿಕತೆಯಲ್ಲಿ ತೀವ್ರ ಮತ್ತು ಮಧ್ಯಮ ಎಂಬ ಎರಡು ಬಗೆ ಇದೆ. ಹಿಂದಿನ ಸರ್ಕಾರ ಮಧ್ಯಮಕ್ಕೆ ಕಡಿಮೆ ಪೌಷ್ಟಿಕ ಆಹಾರ ಕೊರತೆಗೆ ಮಾತ್ರ ಪೌಷ್ಟಿಕಾಂಶವುಳ್ಳ ಆಹಾರ ಕೊಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಬದಲಾವಣೆ ಮಾಡಿ ತೀವ್ರ ಪೌಷ್ಟಿಕಾಂಶದ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಎಲ್ಲರಿಗೂ ನೀಡಬೇಕೆಂಬ ಪ್ರಮುಖ ತೀರ್ಮಾನ ಮಾಡಿದ್ದೇವೆʼʼ ಎಂದು ಸಿಎಂ ವಿವರಿಸಿದರು.

ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಕಲ್ಯಾಣ ಕರ್ನಾಟಕಕ್ಕೆ 24 ಪಿಎಚ್‌ಸಿ ಕೇಂದ್ರವನ್ನು ಸಿಎಚ್ ಸಿ ಕೇಂದ್ರವಾಗಿ ಮೇಲ್ದರ್ಜೇಗೇರಿಸಲಾಗುತ್ತಿದೆ. ಹಾಗು ಹೊಸ ಪಿಎಚ್‌ಸಿಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಬಂದಿರುವುದು ನಮ್ಮೆಲ್ಲ ಪ್ರಯತ್ನಕ್ಕೆ ಜಿಂದಾಲ್ ಕಂಪನಿ ಶಕ್ತಿ ಹಾಗೂ ಬೆಂಬಲ ನೀಡಿದೆ. ಜಿಂದಾಲ್ ಸಂಸ್ಥೆಗೆ ಶಕ್ತಿ ಇದೆ. ಇನ್ನಷ್ಟು ಸಿಎಸ್ ಆರ್ ನಿಧಿಯನ್ನು ಬಳ್ಳಾರಿ, ಹೊಸಪೇಟೆ, ಎರಡೂ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಜಿಂದಾಲ್ ಕೊಡುಗೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಬಿ ನಾಗೇಂದ್ರ, ಸೋಮಶೇಖರ ರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Karnataka Elections | ನಾಯಿ ಮರಿ ಹೇಳಿಕೆಗೆ ಅರುಣ್‌ ಸಿಂಗ್‌ ಆಕ್ರೋಶ: ಇದು ಬೊಮ್ಮಾಯಿಗಲ್ಲ ರಾಜ್ಯದ ಜನರಿಗೆ ಅಪಮಾನ ಎಂದ ಬಿಜೆಪಿ

Exit mobile version