ಬೆಂಗಳೂರು: ಮಾನವನ ಮೆದುಳಿನ ಕೇವಲ ಕೆಲವೇ ಭಾಗ ಮಾತ್ರ ಬಳಕೆಯಾಗುತ್ತಿದೆ. ಅದು ಇನ್ನಷ್ಟು ವಿಸ್ತೃತವಾಗಿ ಬಳಕೆಯಾಗುವಂತೆ ಸಂಶೋಧನೆಗಳನ್ನು ನಡೆಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅಭಿಪ್ರಾಯಪಟ್ಟರು. ಮನುಷ್ಯ ತನ್ನ ಮೆದುಳಿನ ಸಾಮರ್ಥ್ಯದ ಕೇವಲ 25% ಬಳಸಿಕೊಂಡೇ ಇಷ್ಟೆಲ್ಲಾ ಅದ್ಭುತ ಸೃಷ್ಟಿ ಮಾಡಿದ್ದಾನೆ. 100% ಮೆದುಳನ್ನು ಉಪಯೋಗಿಸಿದರೆ ಏನೆಲ್ಲಾ ಸೃಷ್ಟಿಸಬಹುದು ಎಂದು ಅವರು ಅಚ್ಚರಿಪಟ್ಟರು.
ಅವರು ಶನಿವಾರ ಹೆಬ್ಬಾಳದಲ್ಲಿ ಬೆಂಗಳೂರು ಸೈನ್ಸ್ ಗ್ಯಾಲರಿ (Science gallery) ಉದ್ಘಾಟಿಸಿ ಮಾತನಾಡಿದರು. ʻʻಜನಸಾಮಾನ್ಯರು ಸೈನ್ಸ್ ಗ್ಯಾಲರಿ ಪ್ರವೇಶಿಸಿ ವಿಜ್ಞಾನದ ಜ್ಞಾನ ಪಡೆದು ಹೊರಹೋಗುವಂತಾಗಬೇಕು. ಇದಕ್ಕೆ ರಾಜ್ಯ ಸರ್ಕಾರ ಎಲ್ಲಾ ಸಹಕಾರ, ಬೆಂಬಲ ನೀಡಲಿದೆʼʼ ಎಂದು ಬೊಮ್ಮಾಯಿ ತಿಳಿಸಿದರು.
ʻʻವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ತತ್ವಶಾಸ್ತ್ರ, ಆಧ್ಯಾತ್ಮ ಎಲ್ಲದರಲ್ಲೂ ವಿಜ್ಞಾನದ ಅಂಶಗಳು ಹೆಚ್ಚಾಗಿದೆ. ವಿಜ್ಞಾನದಲ್ಲಿ ಸಂಶೋಧನೆಗೆ ಇನ್ನೂ ಸಾಕಷ್ಟು ಅವಕಾಶಗಳಿವೆʼʼ ಎಂದು ಹೇಳಿದರು ಬೊಮ್ಮಾಯಿ.
ʻʻಸೈನ್ಸ್ ಗ್ಯಾಲರಿ ವ್ಯಕ್ತಿಯ ವೈಯಕ್ತಿಕ ವಿಕಸನಕ್ಕೆ ಸಹಾಯವಾಗಬೇಕು. ಆರ್ ಎಂಡ್ ಡಿ ಇಕೋ ಸಿಸ್ಟಮ್, ಏರೋಸ್ಪೇಸ್ ಎಲ್ಲದರಲ್ಲೂ ಕೂಡ ರಾಜ್ಯ ಮುಂಚೂಣಿಯಲ್ಲಿದೆ. ಆರ್ ಎಂಡ್ ನೀತಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕʼʼ ಎಂದು ಸಿಎಂ ನೆನಪಿಸಿದರು.
ಐ.ಟಿ, ಬಿ.ಟಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವ ಎಸ್.ಟಿ. ಸೋಮಶೇಖರ್ , ಬಯೋಕಾನ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ, ಐ.ಟಿ. ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ ಉಪಸ್ಥಿತರಿದ್ದರು.