ಬೆಂಗಳೂರು: ಮುಂದಿನ ಆದೇಶದ ವರೆಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ವರ್ಗಾವಣೆಗಳಿಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ವರ್ಗಾವಣೆ ಪ್ರಸ್ತಾವನೆ ಮಂಡಿಸದಂತೆ ಸೂಚನೆ ನೀಡಲಾಗಿದೆ.
ಅರಣ್ಯ ಮತ್ತು ಪರಿಸರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಇದುವರೆಗೆ ಈ ಸೂಚನೆಗಳು ಹಂತ ಹಂತವಾಗಿ ಹೋಗಿವೆ. ಮುಂದೆ ಬೇರೆ ಇಲಾಖೆಗಳಿಗೂ ಸೂಚನೆ ನೀಡುವ ಸಾಧ್ಯತೆಗಳಿವೆ.
ಗುರುವಾರ ಮತ್ತು ಶುಕ್ರವಾರ ಮುಖ್ಯಮಂತ್ರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆಯಾ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.
ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಇಲಾಖಾವಾರು ವರ್ಗಾವಣೆಗೆ ಅವಕಾಶವಿರುತ್ತದೆ. ಅದನ್ನು ಹೊರತುಪಡಿಸಿದ ಸಂದರ್ಭದಲ್ಲಿ ವರ್ಗಾವಣೆ ಮಾಡಬೇಕಾದರೆ ಸಿಎಂ ಅವರ ಸಹಿ ಆಗಲೇಬೇಕು. ಹಾಗಾಗಿ ನೂರಾರು ಕಡತಗಳು ಮುಖ್ಯಮಂತ್ರಿ ಬಳಿಗೆ ಬರುತ್ತವೆ. ಹೀಗಾಗಿ ಈಗ ಅದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿ | Teacher Transfer | ಶಿಕ್ಷಕರ ವರ್ಗಾವಣೆಗೆ ಹೊಸ ನೀತಿ; ಕರಡು ಅಧಿಸೂಚನೆ ಪ್ರಕಟ