ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನವರು ಆಡಳಿತದ ಭದ್ರ ಬುನಾದಿಯನ್ನು ಹಾಕಿ ಜನಪರವಾದ ಆಡಳಿತ ಮಾಡಲು ನಾಂದಿ ಹಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ (Nijalingappa memory) ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ʻʻಎಸ್.ನಿಜಲಿಂಗಪ್ಪ ಅವರು ಕನ್ನಡ ನಾಡಿನ ಪುತ್ರ. ಇಡೀ ನಾಡಿಗೆ ತನ್ನ ಜೀವವನ್ನು ಮೀಸಲಿಟ್ಟು ಕನ್ನಡ, ಕನ್ನಡ ಭಾಷೆಗೆ ಮಾಡಿರುವ ಕೆಲಸ ಕರ್ನಾಟಕವಾಗಲು ಕಾರಣೀಭೂತವಾಗಿದೆ. ತತ್ವ, ಆದರ್ಶ ಮೌಲ್ಯಾಧಾರಿತ ರಾಜಕಾರಣ, ಕರ್ನಾಟಕದಲ್ಲಿ ಮಾಡಿದರು. ಭಾರತದಲ್ಲಿ ಅವರ ಖ್ಯಾತಿ, ಪ್ರಭಾವ ಇತ್ತು. ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎಐಸಿಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿದಲ್ಲಿ ಸುಧಾರಣೆಗೆ ಮಹತ್ವ ನೀಡಿ, ಆಡಳಿತ ಸುಧಾರಣೆಯನ್ನು ಪ್ರಜಾಪ್ರಭುತ್ವ ಆಗತಾನೆ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನಪರವಾದ, ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ನೀಡಿದ್ದಾರೆʼʼ ಎಂದು ಹೇಳಿದರು.
ಪ್ರಾಮಾಣಿಕ ರಾಜಕಾರಣಿ
ʻʻನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಸೇವೆಯನ್ನು ಮಾಡಿದವರು. ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು. ಇಂದು ನಾವು ಕಾಣುತ್ತಿರುವ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳು ಅವರ ಕಲ್ಪನೆ ಹಾಗೂ ಕ್ರಿಯಾಯೋಜನೆಗಳು. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಮನಸ್ಸು ಮಾಡಿದ್ದರೆ, ಭಾರತದ ರಾಷ್ಟಪತಿಗಳಾಗಬಹುದಿತ್ತು.
ಆದರೆ ಅವರು ಅದನ್ನು ಒಪ್ಪಲಿಲ್ಲ. ಎಂದಿಗೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರ ಅವರ ಹಿಂದೆ ಬಂದಿತ್ತು. ಎಸ್.ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಬೆಂಗಳೂರಿಗೆ ಬನ್ನಿ ಎಂದಾಗಲೂ ಅವರು ಒಪ್ಪಲಿಲ್ಲ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರು ನಮ್ಮೆಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವʼʼ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತತರಿದ್ದರು.
ಇದನ್ನೂ ಓದಿ | Border Dispute | ಶಾ ಜತೆ ಶಿವಸೇನೆ, ಎನ್‌ಸಿಪಿ ಚರ್ಚೆಗೆ ಬೊಮ್ಮಾಯಿ ತಿರುಮಂತ್ರ, ಶೀಘ್ರವೇ ಕೇಂದ್ರ ಸಚಿವರ ಭೇಟಿಗೆ ಸಿಎಂ ತೀರ್ಮಾನ