ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital) ಆರಂಭಿಸಬೇಕೆಂಬ ಜಿಲ್ಲೆಯ ಜನರ ಬಹುಕಾಲದ ಬೇಡಿಕೆ ಕುರಿತು ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಚಿತವಾಗಿ ಏನನ್ನೂ ಹೇಳದಿರುವುದು ಜಿಲ್ಲೆಯ ಜನತೆಯಲ್ಲಿ ನಿರಾಸೆ ಮೂಡಿಸಿದೆ.
“ಜಿಲ್ಲೆಯಲ್ಲಿ ಈಗಾಗಲೇ ಇರುವ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಏನಿದೆ ಎಂಬುವುದರ ಬಗ್ಗೆ ವರದಿ ಪಡೆಯಲಿದ್ದೇನೆ. ಆ ಬಳಿಕ ಆಸ್ಪತ್ರೆ ನಿರ್ಮಾಣದ ತೀರ್ಮಾನ ಕೈಗೊಳ್ಳಲಾಗುತ್ತದೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಟ್ಕಳದ ಮುಠಳ್ಳಿಯಲ್ಲಿ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಪ್ರದೇಶಕ್ಕೆ ತೆರಳಿ ಮೃತ ಲಕ್ಷ್ಮೀನಾರಾಯಣ ನಾಯ್ಕ ಕುಟುಂಬಸ್ಥರಿಗೆ ಪರಿಹಾರ ವಿತರಿಸಿದ ಬಳಿಕ ಮಾತನಾಡಿದ ಅವರು, ವೈದ್ಯರ ಕೊರತೆ ಕೂಡ ಜಿಲ್ಲೆಯಲ್ಲಿದೆ ಎಂಬುದನ್ನು ಪತ್ರಕರ್ತರು ಗಮನಕ್ಕೆ ತಂದಿದ್ದಾರೆ. ವೈದ್ಯರಿಗೆ ಪೋಸ್ಟಿಂಗ್ ಮಾಡಿದರೂ ಇಲ್ಲಿರದೆ ಬೇರೆ ಕಡೆ ಹೋಗುವ ಪ್ರವೃತ್ತಿ ಇದೆ. ಹೀಗಾಗಿ ಈ ಬಗ್ಗೆ ವಿಶೇಷ ಆದೇಶವೊಂದನ್ನು ಮಾಡಲಿದ್ದೇನೆ. ಹಂತಹಂತವಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದರೆ ತಜ್ಞ ವೈದ್ಯರನ್ನು ನೇಮಕ ಮಾಡಲಾಗುತ್ತದೆ. ಇನ್ನು ಎಂಟು- ಹತ್ತು ದಿನಗಳಲ್ಲಿ ಮತ್ತೆ ಜಿಲ್ಲೆಗೆ ಬರಲಿದ್ದೇನೆ. ಜನರ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಇದನ್ನು ಓದಿ | Rain News | ಭಟ್ಕಳದಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಿಸಿದ ಸಿಎಂ